ಬೆಂಗಳೂರು: ರಾಜ್ಯ ರಾಜಧಾನಿಯ (Bengaluru) ಸಾರ್ವಜನಿಕರೇ ಗಮನಿಸಿ. ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಜುಲೈ 16) ನಗರದ ಪ್ರಮುಖ ಪ್ರದೇಶಗಳಲ್ಲಿ ಕಾವೇರಿ ನೀರು (Cauvery Water) ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.
12 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತ
ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತ ಹಾಗೂ 2ನೇ ಘಟ್ಟಗಳಿಗೆ ಒಳಪಡುವ ವ್ಯಾಪ್ತಿಯಲ್ಲಿ ಈ ನೀರಿನ ವ್ಯತ್ಯಯ ಉಂಟಾಗಲಿದೆ. ಜುಲೈ 16ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಒಟ್ಟು 12 ಗಂಟೆಗಳ ಕಾಲ ಜಲರೇಚಕ ಯಂತ್ರಗಾರಗಳ (Pumping Stations) ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ನೀರಿನ ಬಂದ್‌ಗೆ ಕಾರಣವೇನು?
ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತ 2ನೇ ಘಟ್ಟದಡಿಯ, 2,700 ಮೀ.ಮೀ. ಬೃಹತ್ ವ್ಯಾಸದ ಮುಖ್ಯ ಕೊಳವೆಮಾರ್ಗದಲ್ಲಿ (Pipeline) ಸೌರ್ ವಾಲ್ವ್‌ಗಳ ಸೋರಿಕೆ (Sour Valves Leakage) ಕಂಡುಬಂದಿದೆ. ಈ ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಜಲಮಂಡಳಿಯು ಇಂದು ತುರ್ತು ಆಡಳಿತಾತ್ಮಕ ಮತ್ತು ತಾಂತ್ರಿಕ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನೀರು ಪೂರೈಕೆ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಮಂಡಳಿ ಜಾಗೃತಿ ಮತ್ತು ಸಹಕಾರಕ್ಕೆ ಮನವಿ
ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ತಮಗೆ ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಳ್ಳಬೇಕು. ದಿನಬಳಕೆಯ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸುವ ಮೂಲಕ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಇದನ್ನೂ ಓದಿ : ಇಂದಿನಿಂದಲೇ ರಾಜ್ಯದಲ್ಲಿ ಹೊಸ ನಿಯಮ ಜಾರಿ: ‘ಶಾಶ್ವತ ನಿವಾಸ ಪ್ರಮಾಣ ಪತ್ರ’ಕ್ಕೆ ಅರ್ಜಿ ಸಲ್ಲಿಕೆ ಆರಂಭ!