Thursday, July 16, 2026
Homeಕ್ರೈಂBMTC : ಕಳೆದ 4 ವರ್ಷಗಳಲ್ಲಿ 652 ಆಕ್ಸಿಡೆಂಟ್, 167 ಜನ ಬಲಿ - ಬೆಚ್ಚಿ...

BMTC : ಕಳೆದ 4 ವರ್ಷಗಳಲ್ಲಿ 652 ಆಕ್ಸಿಡೆಂಟ್, 167 ಜನ ಬಲಿ – ಬೆಚ್ಚಿ ಬೀಳಿಸುತ್ತೆ ಬಿಎಂಟಿಸಿ ಅಪಘಾತದ ಕರಾಳ ಸಂಖ್ಯೆ!

ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಬಿಎಂಟಿಸಿ (Bmtc) ಬಸ್‌ಗಳು ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಪಾಲಿಗೆ ಆತಂಕದ ನೆರಳಾಗಿ ಪರಿಣಮಿಸುತ್ತಿವೆಯೇ ಎಂಬ ದಟ್ಟ ಅನುಮಾನ ಮೂಡಲಾರಂಭಿಸಿದೆ. 

ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ನಾಲ್ಕು ವರ್ಷಗಳ ಬಿಎಂಟಿಸಿ ಅಪಘಾತಗಳ (Accident) ಅಧಿಕೃತ ಅಂಕಿ-ಅಂಶಗಳು ಹೊರಬಿದ್ದಿದ್ದು, ಸಾರ್ವಜನಿಕರು ಬೆಚ್ಚಿಬೀಳುವಂತಿವೆ. ಈ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಬರೋಬ್ಬರಿ 652 ಬಿಎಂಟಿಸಿ ಅಪಘಾತ ಪ್ರಕರಣಗಳು ದಾಖಲಾಗಿದ್ದು, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಮುನ್ಸೂಚನೆಯಾಗಿದೆ.

ಬೆಳ್ಳಂ ಬೆಳಗ್ಗೆ ಬಿಎಂಟಿಸಿ ಬಸ್ ಡಿಕ್ಕಿ

ಈ ಕರಾಳ ಅಂಕಿ-ಅಂಶಗಳಿಗೆ ಇಂದಿನ ಭೀಕರ ದುರಂತ ಮತ್ತೊಂದು ಸಾಕ್ಷಿಯಾಗಿದೆ. ಇಂದು ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಬೆಂಗಳೂರಿನ ಪ್ರಮುಖ ಜಂಕ್ಷನ್ ಆದ ಕೆ.ಆರ್. ಸರ್ಕಲ್ ಬಳಿ ಎಂದಿನಂತೆ ಕಚೇರಿ ಹಾಗೂ ತಮ್ಮ ಕೆಲಸ ಕಾರ್ಯಗಳಿಗೆ ಧಾವಿಸುತ್ತಿದ್ದ ಪ್ರಯಾಣಿಕರಿಂದ ರಸ್ತೆಗಳು ಗಿಜಿಗುಡುತ್ತಿದ್ದ ಸಮಯದಲ್ಲಿ, ಬಿಎಂಟಿಸಿ ಸಾಮಾನ್ಯ ಬಸ್ ಹಾಗೂ ವಾಯುವಜ್ರ (ವೋಲ್ವೋ) ಬಸ್ ನಡುವೆ ಮುಖಾಮುಖಿಯ ಮಾದರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 

ಸಿಗ್ನಲ್ ಅಥವಾ ವಾಹನ ದಟ್ಟಣೆಯ ಕಾರಣಕ್ಕೆ ರಸ್ತೆಯ ಮುಂದೆ ನಿಂತಿದ್ದ ವಾಯುವಜ್ರ ಬಸ್‌ಗೆ, ಹಿಂಬದಿಯಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಸಾಮಾನ್ಯ ಬಸ್ ನಿಯಂತ್ರಣ ತಪ್ಪಿ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ಬಸ್‌ಗಳ ಮುಂಭಾಗ ಜಖಂಗೊಂಡಿದ್ದು, ಸ್ಥಳದಲ್ಲಿ ಕರಳು ಹಿಂಡುವಂತಹ ಕಿರುಚಾಟ ಕೇಳಿಬಂದಿದೆ.

ಈ ಭೀಕರ ಡಿಕ್ಕಿಯ ಪರಿಣಾಮವಾಗಿ ಬಸ್ ಚಾಲಕ ಅಭಿಷೇಕ್ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಚಾಲಕ ಅಭಿಷೇಕ್ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಚಾಲಕನ ಸೀಟಿನ ಹಿಂಭಾಗದಲ್ಲಿ ಕುಳಿತಿದ್ದ ಯುವತಿಯೊಬ್ಬಳ ಕಾಲು ಬಸ್‌ನ ಮುರಿದುಹೋದ ಕಬ್ಬಿಣದ ಸೀಟುಗಳ ಮಧ್ಯೆ ಸಿಲುಕಿಕೊಂಡಿತ್ತು. ಆಕೆ ನೋವಿನಿಂದ ತೀವ್ರವಾಗಿ ಪರದಾಡುತ್ತಿದ್ದನ್ನು ಕಂಡು ಸ್ಥಳೀಯ ಸಾರ್ವಜನಿಕರು ಹಾಗೂ ಹತ್ತಿರದಲ್ಲಿದ್ದ ವಾಹನ ಸವಾರರು ತಕ್ಷಣವೇ ಅತ್ಯಂತ ಜಾಣ್ಮೆ ಮತ್ತು ಸಾಹಸದಿಂದ ಆಕೆಯನ್ನು ಬಸ್‌ನಿಂದ ಹೊರತೆಗೆದು, ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರ ಈ ಸಮಯಪ್ರಜ್ಞೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿದ 652 ಅಪಘಾತಗಳಲ್ಲಿ ಬರೋಬ್ಬರಿ 167 ಅಮಾಯಕ ಜೀವಗಳು ಬಲಿಯಾಗಿದ್ದು, ನೂರಾರು ಜನ ಕೈಕಾಲು ಕಳೆದುಕೊಂಡು ಅಂಗವಿಕಲರಾಗಿದ್ದಾರೆ. ಬಿಎಂಟಿಸಿ ಚಾಲಕರ ಅತಿವೇಗ, ಅಜಾಗರೂಕತೆ ಹಾಗೂ ಬಸ್‌ಗಳ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

“ಜನರ ಜೀವ ರಕ್ಷಿಸಬೇಕಾದ ಬಿಎಂಟಿಸಿ ಈಗ ಸಾರ್ವಜನಿಕರ ಪಾಲಿಗೆ ಯಮನಾಗಿ ಬದಲಾಗಿದೆ” ಎಂದು ನಾಗರಿಕರು ತೀವ್ರ ಆಸಮಾಧಾನ ಹೊರಹಾಕಿದ್ದು, ಸಾರಿಗೆ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!