ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷೆ ಮಾತನಾಡುವವರೇ ಹೆಚ್ಚು. ಬೇರೆ ಭಾಷೆ ಮಾತನಾಡುವವರೇ ತುಂಬಿರುವ ಬೆಂಗಳೂರಿನಲ್ಲಿ ಕನ್ನಡವನ್ನ ಉಳಿಸುವ ಬೆಳೆಸುವ ಪ್ರಯತ್ನಕ್ಕೆ ಬಿಬಿಎಂಪಿ ಹಾಗೂ ಕನ್ನಡ ಪ್ರಾಧಿಕಾರ ಮುಂದಾಗಿದೆ. ಈ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಸಜ್ಜಾಗಿದೆ.
ನಗರದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮಹತ್ವದ ತೀರ್ಮಾನವನ್ನು ಪಾಲಿಕೆ ಮತ್ತು ಕನ್ನಡ ಪ್ರಾಧಿಕಾರ ತೆಗೆದುಕೊಂಡಿದೆ. ವಾರಕ್ಕೆ 3 ದಿನ ಒಂದೊಂದು ಗಂಟೆಯಂತೆ, ತಿಂಗಳಿಗೆ 36 ಘಂಟೆಗಳಲ್ಲಿ ಕನ್ನಡವನ್ನು ಕಲಿಸಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಪಾಲಿಕೆಯ ಜೊತೆಯೂ ಕನ್ನಡ ಪ್ರಾಧಿಕಾರ ಮಾತುಕತೆ ನಡೆಸಿದೆ.
ಕನ್ನಡ ಕಲಿಸಲು 75 ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆ ನೇಮಕ ಮಾಡಿಕೊಳ್ಳಲಿದೆ. ಕನ್ನಡ ಪ್ರಾಧಿಕಾರದಿಂದಲೂ ಖಾಸಗಿ ಕಂಪನಿ, ಇತರೆ ಜಾಗಗಳಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಮೂಲಕ ಬಿಬಿಎಂಪಿಯ ಎಂಟು ವಲಯಗಳಲ್ಲಿ, ಅನ್ಯ ಭಾಷಿಕರಿಗೆ ಕನ್ನಡ ಕಲಿಸಿಕೊಡಲು, ಕನ್ನಡ ಘಟಕಗಳನ್ನ ರಚಿಸುವಂತೆ ಪಾಲಿಕೆಗೆ ಕನ್ನಡ ಪ್ರಾಧಿಕಾರ ಮನವಿ ಮಾಡಿದೆ. ಕನ್ನಡ ಕಲಿಕೆಗೆ ಪ್ರತ್ಯೇಕ ಪಠ್ಯವನ್ನೂ ತಯಾರು ಮಾಡಿದೆ.