ಬಳ್ಳಾರಿಯಲ್ಲಿ (Bellary) ನಡೆದ ಕಾಂಗ್ರೆಸ್ ಕಾರ್ಯಕರ್ತನ (Congress Worker) ಸಾವಿಗೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ಸಿಕಿದ್ದು, ಮೃತ ರಾಜಶೇಖರ್ ದೇಹ ಹೊಕ್ಕಿರುವುದು ಪೊಲೀಸ್ ಬುಲೆಟ್ ಅಲ್ಲ ಎಂದು ಎಸ್‌ಪಿ ರಂಜಿತ್ ಕುಮಾರ್ ಭಂಡಾರು ತಿಳಿಸಿದ್ದಾರೆ.
ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹಕ್ಕೆ ಗುಂಡು ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಜನಾರ್ಧನ ರೆಡ್ಡಿ, ಶ್ರೀರಾಮಲು ಸೇರಿದಂತೆ 11 ಜನರ ವಿರುದ್ಧ ಕೇಸ್ ದಾಖಲಾಗಿತ್ತು.
ಇದೀಗ ಈ ಘಟನೆಯ ಬಗ್ಗೆ ಎಸ್‌ಪಿ ರಂಜಿತ್ ಕುಮಾರ್ ಭಂಡಾರು ಪ್ರತಿಕ್ರಿಯಿಸಿದ್ದು, ರಾಜಶೇಖರ್ ದೇಹಕ್ಕೆ ಹೊಕ್ಕಿರುವುದು ಖಾಸಗಿ ವ್ಯಕ್ತಿಯ ರಿವಾಲ್ವರ್‌ನ ಬುಲೆಟ್. ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಆದರೆ, ಅದು ಖಾಸಗಿ ರಿವಾಲ್ವಾರ್ ಬುಲೆಟ್ ಎಂದು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿನ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ. ಘಟನೆ ಸಂಬಂಧ ಈಗಾಗಲೇ ಭರತ್ ರೆಡ್ಡಿ ಅವರ ಬೆಂಬಲಿಗರಿಂದ ನಾಲ್ಕು ಪ್ರಕರಣಗಳು ದಾಖಲಾಗಿವೆ. ಜೊತೆಗೆ ಖಾಸಗಿ ವ್ಯಕ್ತಿಯೊಬ್ಬರು ಫೈರಿಂಗ್ ನಡೆಸಿದ ವಿಚಾರದ ಕುರಿತಾಗಿಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ.?
ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರ ನಡುವೆ ಭಾರೀ ಘರ್ಷಣೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಸೇರಿದ್ದ ಈ ಸಂಘರ್ಷದಲ್ಲಿ, ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿಯ ಅಂಗರಕ್ಷಕರು ಗುಂಡು ಹಾರಿಸಿದ ಘಟನೆ ನಡೆದಿದೆ.
ಪರಿಸ್ಥಿತಿ ಕೈಮೀರಿದ ಹಿನ್ನೆಲೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಈ ಗಲಾಟೆಯ ವೇಳೆ ಒಬ್ಬರು ಗುಂಡೇಟಿಗೆ ಬಲಿಯಾಗಿದ್ದು, ಆ ಗುಂಡು ಯಾರಿಂದ ಬಂದಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಈ ಘಟನೆಯ ಬಗ್ಗೆ ಗಾಲಿ ಜನಾರ್ಧನ ರೆಡ್ಡಿ ಪ್ರತಿಕ್ರಿಯಿಸಿದ್ದು, ನಾನು ನನ್ನ ಕ್ಷೇತ್ರದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ನಾನು ಇಲ್ಲದ ವೇಳೆ ಭರತ್ ರೆಡ್ಡಿ ಅವರ ಬೆಂಬಲಿಗರು ನನ್ನ ಮನೆಯ ಮುಂದೆ ಕುರ್ಚಿಗಳನ್ನು ಹಾಕಿಕೊಂಡು ಗಲಾಟೆ ನಡೆಸಿದ್ದಾರೆ.
ಈ ವಿಷಯ ನನಗೆ ತಿಳಿದ ತಕ್ಷಣ ನಾನು ಶ್ರೀರಾಮುಲು ಅವರಿಗೆ ಮಾಹಿತಿ ನೀಡಿದ್ದೆ. ನಂತರ ಅವರು ಪೊಲೀಸರ ಸಮ್ಮುಖದಲ್ಲೇ ಈ ವಿಚಾರವನ್ನು ಪ್ರಶ್ನಿಸಿದಾಗ, ಅದರಿಂದ ಪರಿಸ್ಥಿತಿ ಮತ್ತಷ್ಟು ಉದ್ರಿಕ್ತಗೊಂಡು ಗಲಾಟೆ ನಡೆದಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ನಾನು ಕಾರಿನಿಂದ ಇಳಿದ ಕ್ಷಣದಲ್ಲೇ ಸತೀಶ್ ರೆಡ್ಡಿ ಅವರ ಅಂಗರಕ್ಷಕರು ನಾಲ್ಕು ಸುತ್ತು ಗುಂಡು ಹಾರಿಸಿದರು. ನನ್ನ ಜೀವಕ್ಕೆ ಅಪಾಯ ಉಂಟುಮಾಡುವ ಉದ್ದೇಶದಿಂದಲೇ ಈ ಗಲಾಟೆ ನಡೆದಿದ್ದು, ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದರು. ಈ ಆರೋಪಕ್ಕೆ ಸಾಕ್ಷಿಯಾಗಿ ಗುಂಡೇಟಿನ ಬುಲೆಟ್‌ನ್ನು ಸಾರ್ವಜನಿಕವಾಗಿ ತೋರಿಸಿದರು.
ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆಯ ಹೆಸರಿನಲ್ಲಿ ನಾರಾ ಭರತ್ ರೆಡ್ಡಿ ಊರಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಪರಾಧ ಹಿನ್ನೆಲೆ ಇರುವವರನ್ನು ಜೊತೆಗಿಟ್ಟುಕೊಂಡು ಅವರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಟೀಕಿಸಲಾಗಿದೆ.