ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ(Belagavi) ರೈತರು ನಡೆಸುತ್ತಿರುವ ಪ್ರತಿಭಟನೆ (Sugarcane Farmers Protest) 7ನೇ ದಿನಕ್ಕೆ ಪ್ರವೇಶಿಸಿದೆ.
ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಸಾವಿರಾರು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ಸಂಕಷ್ಟ ಆಲಿಸದ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ರೈತರು ಮತ್ತು ಕಬ್ಬು ಬೆಳೆಗಾರರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಅದನ್ನು ಬದಿಗಿಟ್ಟು ಮಂಗಳವಾರದಿಂದಲೇ ರೈತರ ಜೊತೆ ಹೋರಾಟಕ್ಕಿಳಿದಿದ್ದಾರೆ. ಬೆಳಗಾವಿಯ ಗುರ್ಲಾಪುರದ ಪ್ರತಿಭಟನೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ವಿಜಯೇಂದ್ರ ರಾತ್ರಿಯೂ ರೈತರ ಜೊತೆ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡುವಂತೆ ಗುರ್ಲಾಪುರ ಬಳಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಮುಂದಾಳತ್ವ ವಹಿಸಿ ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ನಾವು ವಿರೋಧ ಪಕ್ಷವಾಗಿ ಇಲ್ಲಿಗೆ ಬಂದಿದ್ದೇವೆ ಎಂದರು.
ಈ ನಾಡಿಗೆ ಅನ್ನ ನೀಡುವ ರೈತರ ಪರವಾಗಿ ನಾವೆಲ್ಲರೂ ಪಕ್ಷಾತೀತವಾಗಿ ನಿಲ್ಲಬೇಕಾಗುತ್ತದೆ. ಹಾಗಾಗಿ, ನಮ್ಮ ಪಕ್ಷದ ಮುಖಂಡರ ಜೊತೆಗೆ ಚರ್ಚಿಸಿ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. 2014ರಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕಬ್ಬಿನ ವಿಚಾರವಾಗಿಯೇ ರೈತ ವಿಠ್ಠಲ ಅರಭಾವಿ ವಿಷ ಕುಡಿದು ಜೀವ ಕಳೆದುಕೊಂಡಿದ್ದರು.
ಆಗ ಬಿ.ಎಸ್. ಯಡಿಯೂರಪ್ಪ ಬೀದಿಗಿಳಿದು ಹೋರಾಟ ಮಾಡಿ ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಕಬ್ಬಿಗೆ 150 ರೂ. ಹೆಚ್ಚುವರಿಯಾಗಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.
ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್
ಗುರ್ಲಾಪುರ ಕ್ರಾಸ್‌ನಲ್ಲಿ ಮಾತನಾಡಿದ ಹಸಿರು ಸೇನೆ ರೈತರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಸಕ್ಕರೆ ಕಾರ್ಖಾನೆಯಿಂದ 3,500 ರೂ., ಕೇಂದ್ರ, ರಾಜ್ಯದಿಂದ 2 ಸಾವಿರ ರೂಪಾಯಿಯಂತೆ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರದಿದ್ದರೆ ನವೆಂಬರ್ 7ರಂದು ಬೆಂಗಳೂರು-ಪುಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ಅನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಅಥಣಿಯಲ್ಲೂ ಪ್ರತಿಭಟನೆ ಕಾವೇರುತ್ತಿದೆ. ಮಂಗಳವಾರ ರಾತ್ರಿ ಸಚಿವ ಶಿವಾನಂದ ಪಾಟೀಲ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಅಣಕು ಪ್ರದರ್ಶನ ಮೂಲಕ ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ, ನ.7ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ!