ಬೆಳಗಾವಿ: ಸಾರ್ವಜನಿಕ ಸ್ಥಳಗಳಲ್ಲಿ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು (Illegal Substance ) ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ (Belagavi ) ಸಿಸಿಬಿ ಪೊಲೀಸರು (Police ) ಭರ್ಜರಿ ಕಾರ್ಯಾಚರಣೆ ನಡೆಸಿ ಬೇಧಿಸಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆ ಸಂಕೀರ್ಣದ ಬಳಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್‌ಪೆಕ್ಟರ್ ನೇತೃತ್ವದ ತಂಡವು ಈ ಹಠಾತ್ ದಾಳಿ ನಡೆಸಿದೆ. ಬಂಧಿತ ಆರೋಪಿಗಳನ್ನು 28 ವರ್ಷದ ಮಹಾದೇವ ಪಾಟೀಲ್ ಹಾಗೂ 25 ವರ್ಷದ ವಿನಾಯಕ ಖಂಡಾಳೆ ಎಂದು ಗುರುತಿಸಲಾಗಿದೆ. ಇವರು ಸಾರ್ವಜನಿಕ ವಲಯದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಾ ಹೆರಾಯಿನ್ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳ ಬಳಿಯಿಂದ ಸಿಸಿಬಿ ಪೊಲೀಸರು ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ 24.80 ಗ್ರಾಂ ತೂಕದ ನಿಷೇಧಿತ ಹೆರಾಯಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಇವರ ಜಾಲಕ್ಕೆ ಮುಂಬೈನಿಂದ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಆಯಾಮದ ಬಗ್ಗೆಯೂ ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಗರದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮಹತ್ವದ್ದಾಗಿದ್ದು, ನಗರ ಪೊಲೀಸ್ ಕಮಿಷನರ್ ಅವರು ಸಿಸಿಬಿ ತಂಡದ ಯಶಸ್ಸನ್ನು ಶ್ಲಾಘಿಸಿದ್ದಾರೆ. ಸದ್ಯ ಈ ಇಬ್ಬರೂ ಆರೋಪಿಗಳ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ದಿಢೀರ್ ಆಸ್ಪತ್ರೆಗೆ ದಾಖಲು