ಹಾವೇರಿ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ ಬಣಕಾರ್‍ಗೆ ಟಿಕೆಟ್ ಖಚಿತವಾಗುತ್ತಿದ್ದಂತೆಯೇ. ಟಿಕೆಟ್ ವಂಚಿತ ಅತೃಪ್ತ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ್‍ರನ್ನು ಸೆಳೆದುಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ. ಈ ಕಾರ್ಯತಂತ್ರದ ಅಂಗವಾಗಿ ಬಿಜೆಪಿ ಸಚಿವ ಬಿ.ಸಿ.ಪಾಟೀಲ್, ಭಾನುವಾರ ಬನ್ನಿಕೋಡ್ ನಿವಾಸಕ್ಕೆ ತೆರಳಿ ಆಪ್ತಸಮಾಲೋಚನೆ ನಡೆಸಿದ್ದಾರೆ.
ಕ್ಷೇತ್ರಾಭಿವೃದ್ಧಿಗೆ ತಮ್ಮೊಡನೆ ಕೈಜೋಡಿಸುವಂತೆ ಮನವಿ ಮಾಡುವ ಸಲುವಾಗಿ ಬಿ.ಎಚ್.ಬನ್ನಿಕೋಡ ಅವರನ್ನು ಭೇಟಿಯಾಗಿದ್ದೇನೆ ಎಂದು ಬಿ.ಸಿ.ಪಾಟೀಲ್ ಹೇಳಿಕೊಂಡಿದ್ದರೂ ಇದರ ಹಿಂದೆ ಹಲವು ಚುನಾವಣಾ ಲೆಕ್ಕಾಚಾರ ಅಡಗಿದೆ. ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ತಮಗೆ ಟಿಕೆಟ್ ನೀಡುವ ಬದಲಾಗಿ ಬಿಜೆಪಿ ಮಾಜಿ ಶಾಸಕ ಬಣಕಾರ್‍ರನ್ನು ಕಾಂಗ್ರೆಸ್‍ಗೆ ಕರೆತಂದು ಅವಕಾಶ ನೀಡಿರುವುದು ಬನ್ನಿಕೋಡ ಅವರನ್ನು ಕೆರಳಿಸಿದೆ. ಈ ಅಸಮಾಧಾನವನ್ನು ತಮ್ಮ ಲಾಭಕ್ಕಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಬಿಜೆಪಿ ಹೊಂಚು ಹಾಕಿದ್ದರೆ ಕಾಂಗ್ರೆಸ್‍ಗೆ ಪಕ್ಷಾಂತರ ಪರ್ವದ ಆತಂಕ ಶುರುವಾಗಿದೆ.
ಏ. 5 ರಂದು ಬೆಂಬಲಿಗರ ಸಭೆಯಲ್ಲಿ ಈ ಕುರಿತು ಖಚಿತ ತೀರ್ಮಾನ ಕೈಗೊಳ್ಳುವುದಾಗಿ ಬನ್ನಿಕೋಡ ತಿಳಿಸಿದ್ದಾರೆ.