ಹಾವೇರಿ : ಮಾಜಿ ಸಿಎಂ, ಹಾವೇರಿ ಹಾಲಿ ಸಂಸದ (Haveri MP) ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಮಾಜಿ ಸಚಿವ ಬಿ.ಸಿ ಪಾಟೀಲ್ (BC Patil) ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಗೆ ಹೋದರೂ ನನಗೆ ಬೊಮ್ಮಾಯಿ ಅಪಾಯಿಂಟ್ಮೆಂಟ್ ಸಿಗಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ ದುರಾದೃಷ್ಟ, ನಮ್ ಎಂಪಿಯವರ ಕಾಲ್‌ಶೀಟ್ ಸಿಗಲಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಬಿಸಿ ಪಾಟೀಲ್,‘ಜುಲೈ 22ನೇ ತಾರೀಖು ರಾಣೆಬೆನ್ನೂರಿನಲ್ಲಿ ಬಸವರಾಜ ಬೊಮ್ಮಾಯಿ ಸಿಕ್ಕಿದ್ದರು. ನಾನೂ ದೆಹಲಿಗೆ ಬರುತ್ತಿದ್ದೇನಿ ಅಂತ ಹೇಳಿದೆ. ಬನ್ನಿ ಸಿಗೋಣ ಅಂತ ಹೇಳಿದ್ರು. ಮರುದಿನ ದೆಹಲಿಗೆ ಹೋದೆ. ಅವರ ಪಿಎಗೆ ಫೋನ್ ಮಾಡಿದೆ. ಬೊಮ್ಮಾಯವರಂತೂ ಫೋನ್ ಎತ್ತಲ್ಲ’ ಅಂತ ಹೇಳಿದ್ರು.
‘ಕ್ಷೇತ್ರಕ್ಕೆ ಬರ್ತಿರ್ತಾರೆ ಹೋಗ್ತಿರ್ತಾರೆ, ಅವರ ಟೂರ್ ಪ್ರೋಗ್ರಾಂನೆಲ್ಲಾ ನೋಡ್ತಿರ್ತೀವಿ. ಅವರು ದೊಡ್ಡೋರು, ಬಹಳ ಮತ್ಸದ್ದಿಗಳು. ಅವರ ತಂದೆ ಕಾಲದಿಂದ ರಾಜಕಾರಣ ಮಾಡಿಕೊಂಡು ಬಂದಿರೋರು. ಸಣ್ಣ ಪುಟ್ಟ ಮಂದಿಗೆ ಸುಲಭವಾಗಿ ರೆಸ್ಪಾಂಡ್ ಮಾಡಲ್ಲ’ ಅಂತ ಬಸವರಾಜ ಬೊಮ್ಮಾಯಿ ವಿರುದ್ಧ ಬಿಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ರು.
ಇದನ್ನೂ ಓದಿ : ‘ಸ್ಮಾರ್ಟ್’ ಆಗಿ ಕಮಿಷನ್ ಹೊಡೆಯೋಕೆ ಸರ್ಕಾರ ಹೊಸ ಪ್ಲ್ಯಾನ್: ಬಸವರಾಜ್ ಬೊಮ್ಮಾಯಿ
‘ಎಷ್ಟೋ ವರ್ಷಗಳು ಆಗೋಯ್ತು, ನೇರವಾಗಿ ಬಸವರಾಜ ಬೊಮ್ಮಾಯಿ ಜೊತೆ ಮಾತಾಡದೇ. ಹಿಂದೊಮ್ಮೆ ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಅಂತ ಕೇಳಿದ್ದೆ. ನಮ್ ಪಿಎ ಇದ್ದಾನೆ, ಅವನಿಗೆ ಕಾಂಟ್ಯಾಕ್ಟ್ ಮಾಡಿ ಅಂತ ಬೊಮ್ಮಾಯಿ ಹೇಳಿದ್ರು. ಅವರ ಪಿಎಗೆ ಫೋನ್ ಮಾಡಿ, ಫೋನ್ ಕೊಡು ಅಂತ ಹೇಳಿದೆ. ಅದ್ಕೆ ಅವರ ಪಿಎ, ಅವರು ಮುಂದಿನ ಗಾಡಿಯಲ್ಲಿ ಇದ್ದಾರೆ. ವಿ ಸೋಮಣ್ಣ ಹಾಗೂ ಬಸವರಾಜ ಬೊಮ್ಮಾಯಿ ಜೊತೆಗಿದಾರೆ ಅಂತ ಪಿಎ ಹೇಳಿದರು. ಸಾಹೇಬ್ರಿಗೆ ಹೇಳಿ, ಫೋನ್ ಕೊಡಪ್ಪಾ ಅಂತ ಹೇಳಿದೆ. ಆದರೆ ಎರಡು ದಿನ ಆದರೂ ಯಾವುದೂ ಕಾಲ್ ಬರಲಿಲ್ಲ’ ಅಂತ ಬಿಸಿ ಪಾಟೀಲ್ ಬೇಸರ ಹೊರಹಾಕಿದ್ದಾರೆ.
‘ನಾನು ದೆಹಲಿಯಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದೆ. ಶಿವಮೊಗ್ಗ ಸಂಸದರಾದ ಬಿ ವೈರಾಘವೇಂದ್ರರನ್ನು ಭೇಟಿ ಮಾಡಿದೆ. ಆದರೆ, ನಮ್ಮ ಸಂಸದರನ್ನು ದೆಹಲಿಗೆ ಬಂದ್ರೂ ಭೇಟಿ ಮಾಡೋಕಾಗಲಿಲ್ಲ. ಆಗ ಮನಸಿಗೆ ಬೇಸರ ಆಯ್ತು. ನಮ್ ದುರಾದೃಷ್ಟ ನಮ್ ಸಂಸದರ ಕಾಲ್ ಶೀಟ್ ಸಿಗಲಿಲ್ಲ’ ಅಂತ ಹೇಳಿದೆ ಅಂತ ಬಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಬಳಿ ಹಲವು ವಿಚಾರ ಚರ್ಚೆ ಮಾಡಿದ್ದೇನೆ. ರಾಣೆಬೆನ್ನೂರು, ಬೈಂದೂರು ಹೈವೇ ಆಗಿದ್ದೇ ರಾಘವೇಂದ್ರ ಶ್ರಮದಿಂದ. ಹಿರೇಮೊರಬದ ಬಳಿ ಫ್ಲೈ ಓವರ್ ನಿರ್ಮಾಣದ ಬಗ್ಗೆ ಚರ್ಚೆ ಮಾಡಿದೆ’ ಅಂತ ಬಿಸಿ ಪಾಟೀಲ್ ಹೇಳಿದ್ದಾರೆ.
‘ಸರ್ವಜ್ಞನ ಜನ್ಮಸ್ಥಳವನ್ನು ಪ್ರವಾಸೋದ್ಯಮದಲ್ಲಿ ಏನಾದ್ರೂ ಅಭಿವೃದ್ಧಿ ಮಾಡಿಸಬೇಕು ಅಂತ ನಮ್ಮ ಸಂಸದರನ್ನ ಭೇಟಿ ಮಾಡಲು ಹೋದೆ. ಆದರೆ ಅವರ ಅಪಾಯಿಂಟ್ಮೆಂಟ್ ಸಿಗಲಿಲ್ಲ ಅಂದ್ರೆ ಏನ್ ಮಾಡೋದು?’ಅಂತ ಬಿಸಿ ಪಾಟೀಲ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಭೇಟಿಯಾದ ಬಿ.ಸಿ ಪಾಟೀಲ್
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ. ಅವರು ನಾಲ್ಕನೇ ಫ್ಲೋರ್‌ನಲ್ಲಿ ಇದ್ದರು,ನಾನು ಮೂರನೇ ಫ್ಲೋರ್‌ನಲ್ಲಿ ಇದ್ದೆ. ಮುಖ್ಯಮಂತ್ರಿಗಳು ಎಂಬ ಸೌಜನ್ಯಕ್ಕೆ ಭೇಟಿ ಮಾಡಿದೆ. ನಾವೂ ಕೂಡಾ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು, ಹೀಗಾಗಿ ಭೇಟಿಯಾದೆ. ಇದರಲ್ಲಿ ಬೇರೆ ಏನೂ ಅರ್ಥ ಕಲ್ಪಿಸೋ ಅಗತ್ಯ ಇಲ್ಲ ಎಂದು ಬಿ.ಸಿ ಪಾಟೀಲ್ ಹೇಳಿದರು.