ನವದೆಹಲಿ: ಅಮುಲ್ ಮತ್ತು ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ನಂದಿನಿ ರಾಷ್ಟ್ರಮಟ್ಟದ ಬ್ರಾಂಡ್ ಆಗಿದ್ದು, ಕೆಎಂಎಫ್ ಉತ್ಪನ್ನಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಮುಲ್ ಬಗ್ಗೆ ಯಾರೂ ಸಹ ಆತಂಕ ಪಡಬೇಕಿಲ್ಲ ಎಂದು ಸಿಎಂ ಭರವಸೆಯನ್ನೂ ನೀಡಿದ್ದಾರೆ.
ಅಮುಲ್ ಸಂಸ್ಥೆಯ ಹಾಲಿನ ಉತ್ಪನ್ನಗಳು ರಾಜ್ಯಕ್ಕೆ ಕಾಲಿಡುತ್ತಿದ್ದು, ಇದೇ ವೇಳೆಯಲ್ಲಿ ನಂದಿನಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವೂ ಉಂಟಾಗಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು.
ಸಚಿವ ಸುಧಾಕರ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ಅಮುಲ್ ಅಂದ್ರ ಬಿಜೆಪಿ ಕಾಂಗ್ರೆಸ್ ಅಂದರೆ ನಂದಿನಿ ಎಂದು ಭಾವಿಸಬೇಡಿ, ಪ್ರತಿಯೊಂದನ್ನೂ ಕಾಮಾಲೆ ಕಣ್ಣಿನಿಂದ ನೋಡಬೇಡಿ ಎಂದು ಕಾಂಗ್ರೆಸ್‍ನ್ನು ಟೀಕಿಸಿದ್ದಾರೆ. ಇದುವರೆಗೂ ಹಾಲು ಉತ್ಪಾದಕರಿಗೆ ಬೆಂಬಲವಾಗಿ ನಿಂತಿರುವುದು ಬಿಜೆಪಿ ಸರ್ಕಾರ. ನಮ್ಮ ನಂದಿನಿ ಉತ್ಪನ್ನಗಳು ದೇಶಾದ್ಯಂತ ಹಲವು ರಾಜ್ಯಗಳಿಗೆ ಮಾತ್ರವಲ್ಲದೇ ತಿರುಪತಿ ದೇವಾಲಯ, ಭಾರತಿಯ ಸೇನೆಗೂ ಪೂರೈಕೆಯಾಗುತ್ತಿದೆ ಎಂದಿದ್ದಾರೆ