ಮಹಾತ್ಮ ಗಾಂಧಿಯ (Mahatma Gandhi) ಹೆಸರಿನಲ್ಲಿ ಕಾಂಗ್ರೆಸ್ (Congress) ಲಾಭ ಪಡೆಯುತ್ತಿದೆ. ಗಾಂಧೀಜಿಯನ್ನು ಒಮ್ಮೆಯಲ್ಲ ಒಂದಲ್ಲ ಹಲವಾರು ಬಾರಿ ಕೊಲೆ ಮಾಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯನ್ನು ಕಾಂಗ್ರೆಸ್ ಪಕ್ಷ ಒಂದೇ ಬಾರಿ ಅಲ್ಲ, ಹಲವು ಬಾರಿ ಕೊಲೆ ಮಾಡಿದೆ. ಗಾಂಧಿ ಹೆಸರನ್ನು ಬಳಸಿಕೊಂಡು ಲಾಭ ಪಡೆಯುವ ಕಾಂಗ್ರೆಸ್, ತನ್ನ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದಲೇ ಇಂದು ಗಾಂಧೀಜಿ ಬಗ್ಗೆ ಮಾತನಾಡುತ್ತಿದೆ ಎಂದು ಆರೋಪಿಸಿದರು.
ಗಾಂಧೀಜಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಹೇಳಿದ್ದರು. ಆದರೆ ನೆಹರು ಅವರು ಅದನ್ನು ಜಾರಿಗೊಳಿಸಲಿಲ್ಲ. ಅದೇ ಸಮಯದಲ್ಲಿ ಗಾಂಧೀಜಿ ಹತ್ಯೆಯಾದರು. ನಂತರ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಗಾಂಧೀಜಿಯ ತತ್ವಗಳನ್ನು ಕೊಲೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷ ಗಾಂಧೀಜಿ ವಿಚಾರಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಗಾಂಧೀಜಿಯನ್ನು ಹಲವಾರು ಬಾರಿ ಕೊಲೆ ಮಾಡಿದೆ ಎಂದು ಬಸವರಾಜ್ ಬೊಮ್ಮಾಯಿ ಆರೋಪಿಸಿದರು.
ಗಾಂಧಿ ಮತ್ತು ರಾಮನನ್ನು ಬೇರ್ಪಡಿಸುವ ಮೂಲಕ ಕಾಂಗ್ರೆಸ್ ಪಕ್ಷ ತಪ್ಪು ಮಾಡುತ್ತಿದೆ. ರಾಮ ಮತ್ತು ಗಾಂಧಿ ಬೇರೆ ಬೇರೆ ಅಲ್ಲ. ಗಾಂಧೀಜಿಯ ಆತ್ಮವೇ ರಾಮನ ನಾಮವನ್ನು ಜಪಿಸುತ್ತಿತ್ತು. ರಾಮನ ತತ್ವಗಳನ್ನು ನಂಬಿದ್ದ ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆಯನ್ನು ದೇಶಕ್ಕೆ ನೀಡಿದ್ದರು.
ಆದರೆ ಗಾಂಧೀಜಿಯ ಆತ್ಮದಲ್ಲಿದ್ದ ರಾಮನ ಹೆಸರನ್ನು ಇಂದು ಕೇವಲ ಉದ್ಯೋಗ ಖಾತ್ರಿ ಯೋಜನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮೊದಲಿಗೆ ಆ ಯೋಜನೆಗೆ ನೆಹರು ಹೆಸರಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಗಾಂಧಿ ಹೆಸರನ್ನು ಬಳಸಲಾಯಿತು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ಪಕ್ಷ ಗಾಂಧಿ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದು, ತನ್ನ ಅಸ್ತಿತ್ವವೇ ಕಳೆದುಹೋಗುವ ಭಯದಿಂದಲೇ ಈ ರೀತಿಯ ಮಾತುಗಳನ್ನು ಆಡುತ್ತಿದೆ ಎಂದು ಆರೋಪಿಸಿದರು.