ಗದಗ: ಮತದಾರರ ಪಟ್ಟಿ (Voter list) ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಮಾಜಿ ಸಚಿವ ಎಚ್.ಕೆ. ಪಾಟೀಲರ (HK patil ) ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai )ಸ್ಫೋಟಕ ಆರೋಪ ಮಾಡಿದ್ದಾರೆ.
ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮತದಾರರ ಪಟ್ಟಿಯಲ್ಲಿ ಗಂಭೀರ ಲೋಪದೋಷಗಳು ಉಂಟಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹುಲಕೋಟಿಯ ಬೂತ್ ನಂಬರ್ 143ರ ಕ್ರಮ ಸಂಖ್ಯೆ 161, 183 ಹಾಗೂ 153ನೇ ಬೂತ್‌ನ ಕ್ರಮ ಸಂಖ್ಯೆ 393ರಲ್ಲಿ ಹನಂಮತಗೌಡ ಕೃಷ್ಣಗೌಡ ಪಾಟೀಲ (ಎಚ್.ಕೆ. ಪಾಟೀಲ) ಎಂಬ ಹೆಸರಿದೆ. ಪ್ರಮುಖ ನಾಯಕರ ಹೆಸರೇ ಮೂರು ಬಾರಿ ಪುನರಾವರ್ತನೆಯಾಗಿದ್ದರೂ ತಹಶೀಲ್ದಾರ್ ಅವರು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಬೊಮ್ಮಾಯಿ ದೂರಿದ್ದಾರೆ.
ಕ್ಷೇತ್ರವಾರು ಮಾಹಿತಿ ನೀಡಿದ ಅವರು, ರೋಣ ಮತಕ್ಷೇತ್ರದಲ್ಲಿ 3,084 ಹಾಗೂ ಗದಗ ಕ್ಷೇತ್ರದಲ್ಲಿ 2,305 ಮತದಾರರ ಹೆಸರುಗಳು ಡಬಲ್ ಮತ್ತು ತ್ರಿಬಲ್ ಆಗಿ ರಿಪೀಟ್ ಆಗಿವೆ. ರೋಣದಲ್ಲಿ ಅಲ್ಲಾ ಸಾಬ್ ಎಂಬ ವ್ಯಕ್ತಿಯ ಹೆಸರು ಐದು ಕಡೆ ನಮೂದಾಗಿದೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಪಟ್ಟಿ ಮಾಡಿದ್ದಾರೆ.
ಅಧಿಕಾರಿಗಳಿಗೆ ಸರಿಯಾದ ತರಬೇತಿ ಸಿಕ್ಕಿಲ್ಲ. ಜನರ ಬದಲಾಗಿ ಅಂಜುಮನ್ ಇಸ್ಲಾಂ ಮಸೀದಿಯಲ್ಲಿ ಮತದಾರರ ನಮೂನೆಗಳನ್ನು ತುಂಬಿಸಲಾಗುತ್ತಿದ್ದು, ಒಂದು ವರ್ಗದ ಜನರಿಗೆ ಮುಕ್ತವಾಗಿ ಬಿಡಲಾಗಿದೆ ಎಂದು ಅಕ್ರಮದ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸಮರ್ಪಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕೆಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಚಿವರ ಆಯ್ಕೆ ನಂತರ 50ಕ್ಕೂ ಹೆಚ್ಚು ನಿಗಮ-ಮಂಡಳಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ