ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದೆ. ಮುಸ್ಲಿಮರಿಗೆ ಇದ್ದಂತಹ ಒಬಿಸಿ ಮೀಸಲಾತಿಯನ್ನು ರದ್ದುಪಡಿಸಲಾಗಿದ್ದು, ಈ ಬಗ್ಗೆ ಶುಕ್ರವಾರ ಸಂಜೆ ಸಿಎಂ ಬಸವರಾಜ್ ಬೊಮ್ಮಾಯಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ.
ಎಸ್‍ಟಿ ಸಮುದಾಯಕ್ಕೆ ಶೇ 3 ರಿಂದ ಶೇ 7 ರಷ್ಟು ಹಾಗೂ ಎಸ್‍ಸಿ ಸಮುದಾಯಕ್ಕೆ ಶೇ 15 ರಿಂದ ಶೇ 17 ರಷ್ಟು ಹೆಚ್ಚಳದ ಅಂಕಿಅಂಶವನ್ನು ಬೊಮ್ಮಾಯಿ ಸರ್ಕಾರ ಬಹಿರಂಗಪಡಿಸಿದೆ. ಒಳಮೀಸಲಾತಿ ಬಗ್ಗೆ ಜೆಸಿ ಮಾಧುಸ್ವಾಮಿ ನೇತೃತ್ವದ ಉಪಸಮಿತಿ ನೀಡಿದ್ದ ವರದಿಯನ್ನು ಜಾರಿಗೊಳಿಸಲಾಗಿದೆ. ಎಸ್‍ಸಿ ಎಡಗೈ ಸಮುದಾಯಕ್ಕೆ 6%, ಎಸ್‍ಸಿ ಬಲಗೈ ಸಮುದಾಯಕ್ಕೆ 5.5%, ಸ್ಪøಶ್ಯ ಸಮುದಾಯಕ್ಕೆ (ಬಂಜಾರ, ಬೋವಿ, ಕೊರಚ, ಕೊರಮ) 4.5% ಹಾಗೂ ಇತರೆ ಸಣ್ಣಪುಟ್ಟ ವರ್ಗಗಳಿಗೆ 1% ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ ಒಟ್ಟಾರೆ ಶೇ 16% ಒಳಮೀಸಲಾತಿ ಯಥಾವತ್ತಾಗಿ ಉಳಿಯಲಿದೆ
ಕೇಂದ್ರದ ಅನುಮೋದನೆಗಾಗಿ ಶಿಫಾರಸು ಮಾಡಲಾಗಿರುವ ವರದಿಯಂತೆ ಅಲ್ಪಸಂಖ್ಯಾತ ವರ್ಗದಡಿ ಮುಸ್ಲಿಂ ಸಮುದಾಯಕ್ಕೆ ಇದ್ದಂತಹ ಓಬಿಸಿ ರದ್ದುಪಡಿಸಲಾಗಿದ್ದು, ಅವರನ್ನು ಇಡಬ್ಲ್ಯುಎಸ್ ಅಡಿ ತರಲು ನಿರ್ಧರಿಸಲಾಗಿದೆ. ಮುಸ್ಲಿಂ ಪ್ರವರ್ಗ ಒಂದರಲ್ಲಿದ್ದ ಪಿಂಜಾರ, ಚಪ್ಪರಬಂದ್ ಮುಂತಾದ ಸಮುದಾಯಗಳನ್ನು ಯಥಾವತ್ತಾಗಿರಿಸಲಾಗಿದೆ. ಪ್ರವರ್ಗ 2 ನ್ನೂ ಸಹ ಯಥಾಸ್ಥಿತಿಯಲ್ಲಿರಿಸಲಾಗಿದೆ. ಶೇ 4ರಷ್ಟು ಇದ್ದ ಓಬಿಸಿ ಮೀಸಲಾತಿ ರದ್ದು ಪಡಿಸಲಾಗಿದ್ದು, ಈ ಉಳಿಕೆಯನ್ನು 2ಸಿ ಅಡಿಯಲ್ಲಿ ಶೇ 2 ರಷ್ಟು ಒಕ್ಕಲಿಗರಿಗೆ, ಶೇ 2 ರಷ್ಟು ವೀರಶೈವ ಲಿಂಗಾಯಿತರಿಗೆ ನೀಡುತ್ತಿರುವುದಾಗಿ ಸಿಎಂ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.