ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲು ನಿರ್ಧರಿಸಿದ್ದು, ಚುನಾವಣೆಯ ಬಳಿಕ ಮೀಸಲಾತಿ ಹೆಚ್ಚಳ ಮತ್ತು ಕೇಂದ್ರ ಓಬಿಸಿಗಾಗಿ ಹೋರಾಟ ಮುಂದುವರೆಸುವುದಾಗಿ ಬಸವ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ಕಳೆದ 71 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕಾರಣಿ ಸಮಿತಿಯನ್ನು ಉದ್ದೇಶಿಸಿ ಶನಿವಾರ ಬಸವ ಮೃತ್ಯುಂಜಯ ಶ್ರೀಗಳು ಮಾತನಾಡಿದ್ದಾರೆ.
2ಡಿ ಹೊಸ ಪ್ರವರ್ಗ ಸೃಷ್ಟಿಸಿ ನಮ್ಮ ಸಮುದಾಯಕ್ಕೆ ನೂತನ ಮೀಸಲಾತಿ ನೀತಿಯನ್ನು ಸೃಷ್ಟಿಸಲಾಗಿದೆ ಎಂದು ನುಡಿದ ಬಸವ ಮೃತ್ಯುಂಜಯ ಶ್ರೀಗಳು, ಇದು ನಮ್ಮ ನಿರಂತರ ಹೋರಾಟಕ್ಕೆ ಸಂದ ಐತಿಹಾಸಿಕ ಜಯವಾಗಿದೆ ಎಂದು ನುಡಿದಿದ್ದಾರೆ. ಕೇವಲ ಲಿಂಗಾಯಿತ, ಪಂಚಮಸಾಲಿ ಒಳಪಂಗಡಗಳಷ್ಟೇ ಅಲ್ಲದೇ, ಇತರೆ ಸಮುದಾಯಕ್ಕೂ ಸಹ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ ಹೆಗ್ಗಳಿಕೆ ನಮ್ಮದಾಗಿದೆ ಎಂದ ಶ್ರೀಗಳು ಇದಕ್ಕಾಗಿ ನೆರವಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಸರ್ಕಾರದ ಆದೇಶದ ಪ್ರತಿ ಸಿಕ್ಕ ಮೇಲೆ ಕೂಡಲ ಸಂಗಮಕ್ಕೆ ತೆರಳಲಿದ್ದು, ಬಳಿಕ ವಿಜಯೋತ್ಸವ ನಡೆಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ ಬಸವ ಮೃತ್ಯುಂಜಯ ಶ್ರೀಗಳು ಮುಂದೆ ಎಲ್ಲಾ ಲಿಂಗಾಯಿತ ಸಮಾಜವನ್ನು ಕೇಂದ್ರ ಮೀಸಲಾತಿ ಓಬಿಡಿ ಪಟ್ಟಿಗೆ ಸೇರಿಸುವಂತೆ ಹೋರಾಟ ನಡೆಸುವುದಾಗಿ ಸೂಚನೆ ನೀಡಿದ್ದಾರೆ.
ಬಸವ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಶ್ರೀಗಳ ಅಭಿಮತಕ್ಕೆ ಎಲ್ಲರಿಂದಲೂ ಒಮ್ಮತ ಮೂಡಿಲ್ಲ. ಸರ್ಕಾರದ ಮೀಸಲಾತಿ ಆದೇಶಕ್ಕೆ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಇದುವರೆಗೂ ಸಮುದಾಯಕ್ಕೆ 15% ಮೀಸಲಾತಿ ಕೊಡಿಸುವುದಾಗಿ ಹೇಳಿ ಎರಡು ವರ್ಷದಿಂದ ಹೋರಾಟ ನಡೆಸಿದ್ದೆವು. ಆದರೆ ಸರ್ಕಾರ ಕೇವಲ 7% ಮೀಸಲಾತಿ ನೋಡಿ ಚುನಾವಣಾ ಸಮಯದಲ್ಲಿ ಕಣ್ಣಿಗೆ ಮಣ್ಣೆರೆಚುತ್ತಿದೆ. ಜನರ ಭರವಸೆ ಈಡೇರಿಸಲಾಗದ ನಾನು ಮೀಸಲಾತಿ ಹೋರಾಟದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಸಭಾತ್ಯಾಗ ಮಾಡಿದ್ದಾರೆ.