ಮೀಸಲಾತಿ ಬದಲಾವಣೆಯನ್ನು ಒಪ್ಪುವಂತೆ ಸ್ವಾಮೀಜಿಗಳಿಗೆ 25 ಬಾರಿ ಕರೆ ಮಾಡಿ ಬಸವರಾಜ್ ಬೊಮ್ಮಾಯಿ ಅವರು ಒತ್ತಡ ಹೇರಿದ್ದರು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ಸರಿಯಾದ ಮಾಹಿತಿ ಗೊತ್ತಿಲ್ಲವೆಂದು ಕಾಣುತ್ತೆ, ನಮಗೆ ಯಾರೂ ಒತ್ತಡ ಹೇರಿಲ್ಲ. ನಮ್ಮ ಮೀಸಲಾತಿ ಬೇಡಿಕೆ ಪಾದಯಾತ್ರೆಗೆ ಅವರೂ ಬಂದು ಬೆಂಬಲ ಕೊಟ್ಟಿದ್ದರು. ದೂರವಾಣಿ ಮೂಲಕವೂ ಹೋರಾಟದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕೇಂದ್ರ ಸರ್ಕಾರ ಅಥವಾ ಸಿಎಂ ಬೊಮ್ಮಾಯಿ ನಮಗೆ ಯಾವುದೇ ಒತ್ತಡ ಹಾಕಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಚುನಾವಣೆ ನೀತಿ ಸಂಹಿತೆ ಬಂದ್ರೆ ಕಷ್ಟ ಆಗಬೋದು, ನಮ್ಮ ಹೋರಾಟದಿಂದ ಸಮುದಾಯದ ಜನ ನಿರಾಶೆ ಆಗಬಾರ್ದು. ಹಾಗಾಗಿ, 2ಡಿ ಮೀಸಲಾತಿಯನ್ನು ಒಪ್ಪಿಕೊಂಡಿದ್ದೇವೆ. ಹೊಟ್ಟೆ ತುಂಬಾ ಊಟ ಕೊಡಿ ಎಂದು ಸರ್ಕಾರವನ್ನ ಕೇಳಿದ್ವಿ, ಆದರೆ ಸರ್ಕಾರದಿಂದ ಅದು ಸಾಧ್ಯವಾಗದೆ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಎರಡೂವರೆ ವರ್ಷದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ, ಇದು ಮೊದಲ ಮೆಟ್ಟಿಲು. ನಾವು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಸ್ವಲ್ಪ ಮಟ್ಟಿಗಾದರೂ ಮೀಸಲಾತಿ ಪಡೆದುಕೊಂಡಿರೋದು ಖುಷಿ ಕೊಟ್ಟಿದೆ ಎಂದವರು ಹೇಳಿದ್ದಾರೆ