ವಿಜಯಪುರ: ಕರ್ನಾಟಕದಲ್ಲಿ ಭೀಕರ ಬರಗಾಲದ (Drought) ಪರಿಸ್ಥಿತಿ ತಲೆದೋರಿದ್ದರೂ, ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ಸಚಿವ ಸಂಪುಟ ವಿಸ್ತರಣೆಯ ಆಕಾಂಕ್ಷೆಯೊಂದಿಗೆ ನವದೆಹಲಿಯಲ್ಲಿ (Delhi) ಬೀಡು ಬಿಟ್ಟಿರುವುದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil yatnal) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಎಲ್ಲರನ್ನೂ ರಾಜ್ಯಕ್ಕೆ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತಹ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದೆ, ಅಧಿಕಾರಕ್ಕಾಗಿ ದೆಹಲಿಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು. ನಾಯಕರು ತಕ್ಷಣವೇ ತಾಯ್ನಾಡಿಗೆ ಮರಳಿ ಬರ ನಿರ್ವಹಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೇ, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ವಾರವೂ ಕಡ್ಡಾಯವಾಗಿ ಬರ ಪರಿಸ್ಥಿತಿಯ ಪರಾಮರ್ಶನಾ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಸಭೆಯಲ್ಲೇ ಫೋನ್‌ನಲ್ಲಿ ಬ್ಯುಸಿಯಾಗಿದ್ದ ಉಡುಪಿ ಡಿಸಿಯ ಬೆವರಿಳಿಸಿದ ಸಿಎಂ
ಕೇವಲ ಕೇಂದ್ರ ಸರ್ಕಾರದತ್ತ ಬೆರಳು ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬರಗಾಲದಿಂದ ಕಂಗಾಲಾಗಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ಅನ್ನದಾತರಿಗೆ ಧೈರ್ಯ ತುಂಬುವ ಕೆಲಸವನ್ನು ಆಡಳಿತಾರೂಢ ಸರ್ಕಾರ ಮೊದಲು ಮಾಡಬೇಕಿದೆ. ದೆಹಲಿಯಲ್ಲಿ ತಂಗಿರುವ ಜನಪ್ರತಿನಿಧಿಗಳನ್ನು ತಕ್ಷಣವೇ ರಾಜ್ಯಕ್ಕೆ ವಾಪಸ್ ಕಳುಹಿಸುವಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವಕ್ಕೆ ಅವರು ಈ ಮೂಲಕ ಆಗ್ರಹಿಸಿದ್ದಾರೆ.