Wednesday, March 26, 2025
Homeರಾಜಕೀಯಬಹಿರಂಗವಾಗಿ ಆತ್ಮಹತ್ಯೆಗೆ ಯತ್ನಿಸಿದ ಬಂಜಾರಸ್ವಾಮೀಜಿ

ಬಹಿರಂಗವಾಗಿ ಆತ್ಮಹತ್ಯೆಗೆ ಯತ್ನಿಸಿದ ಬಂಜಾರಸ್ವಾಮೀಜಿ

ಹಾವೇರಿ: ಪರಿಶಿಷ್ಟ ಸಮುದಾಯಕ್ಕೆ ನೀಡಲಾಗಿರುವ ಒಳಮೀಸಲಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಬಂಜಾರ ಸಮುದಾಯದ ಗುಂಡೂರು ತಿಪ್ಪೇಸ್ವಾಮೀ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಹಾಗೂ ಪೊಲೀಸರು ಸ್ವಾಮೀಜಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಗ್ಗಾಂವ್ ತಾಲೂಕಿನ ಗುಂಡೂರು ಗ್ರಾಮದಲ್ಲಿ ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದಿಂದ ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳನ್ನೂ ಸಹ ನಿರ್ಮಿಸಲಾಗಿದ್ದು, ವೇದಿಕೆಯ ಮೇಲೆ ಹತ್ತಿ ಬಂದ ಸ್ವಾಮೀಜಿ ತಮ್ಮ ಶಲ್ಯವನ್ನು ಆ ಮೆಟ್ಟಿಲೆಗೆ ಕಟ್ಟಿ ತಮ್ಮ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾರೆ. ಪ್ರತಿಭಟನಾನಿರತರು ಕೂಡಲೇ ಧಾವಿಸಿ ಸ್ವಾಮೀಜಿಯ ಪ್ರಯತ್ನನ್ನು ವಿಫಲಗೊಳಿಸಿದ್ದಾರೆ. ಶಿಗ್ಗಾಂವ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಕೊಂಚಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ಲಘುಲಾಠೀಪ್ರಹಾರ ನಡೆಸಿ ಚದುರಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!