ಬೆಂಗಳೂರು: ಸಿನಿ ಜಗತ್ತಿನ ಅದ್ದೂರಿ ಹಬ್ಬ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಿತು. ಈ ವೇಳೆ ಅತ್ಯುತ್ತಮ ಚಿತ್ರಗಳಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯ್ತು
ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ “ನಾನು ಕುಸುಮ” ಹೊರಹೊಮ್ಮಿದೆ. “ಹದಿನೇಳೆಂಟು” ಚಿತ್ರಕ್ಕೆ ದ್ವಿತೀಯ ಹಾಗೂ “ಫೋಟೋ” ಸಿನಿಮಾಗೆ ತೃತೀಯ ಸ್ಥಾನ ಲಭ್ಯವಾಗಿದೆ.
ಏಷ್ಯನ್ ವಿಭಾಗದಲ್ಲಿ ಇಂಡೋನೇಷ್ಯಾದ “ಬಿಫೋರ್ ನೌ ಅಂಡ್ ದೆನ್” ಹಾಗೂ ಇರಾನ್ ನ “ಮದರ್ ಲೆಸ್” ಮೊದಲ ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಶ್ರೀಲಂಕಾದ “ಸ್ಯಾಂಡ್’ ಎರಡನೇ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದೆ. ಲಿಂಗದೇವರು ನಿರ್ದೇಶನದ ಕನ್ನಡದ “ವಿರಾಟಪುರದ ವಿರಾಗಿ” ಹಾಗೂ ಬಾಂಗ್ಲಾದೇಶದ “ಎ ಟೇಲ್ ಆಫ್ ಟೂ ಸಿಸ್ಟರ್ಸ್”ಮೂರನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
ಉಳಿದಂತೆ ಏಷ್ಯನ್ ಸಿನಿಮಾ ಸ್ಪರ್ಧೆಯ ವಿಶೇಷ ಜ್ಯೂರಿ ವಿಭಾಗದಲ್ಲಿ “ಇನ್”ಸಿನಿಮಾ, ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಚಂಪಾ ಪಿ ಶೆಟ್ಟಿ ನಿರ್ದೇಶನದ “ಕೋಳಿ ಎಸರು” ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದಿದೆ.
ಕನ್ನಡ ಸಿನಿಮಾದ ವಿಶೇಷ ಜ್ಯೂರಿ ಆಯ್ಕೆಯಾಗಿ ನಿರ್ದೇಶಕ ಶಿವಧ್ವಜ್ ಅವರ ತುಳು ಚಿತ್ರ “ಕೊರಮ”, ”19.20.21” ಚಿತ್ರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವಿಶೇಷ ಆಯ್ಕೆಯ ಚಿತ್ರವಾಗಿ “ಆದಿವಾಸಿ” ಸಿನಿಮಾ ಪ್ರಶಸ್ತಿಗೆ ಪಾತ್ರವಾಯಿತು.
ಚಿತ್ರೋತ್ಸವದಲ್ಲಿ ಪೋಷಕ ನಟ ದೊಡ್ಡಣ್ಣ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ವಾರ್ತಾ ಇಲಾಖೆ ಆಯುಕ್ತ ಪಿ.ಎಸ್. ಹರ್ಷ, ಇಲಾಖೆ ನಿರ್ದೇಶಕ ಮುರಳೀಧರ್ ಹಾಗೂ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.