ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ನಡೆಯುವ ಪ್ರಖ್ಯಾತ ಧರ್ಮರಾಯನ ಕರಗ ಗುರುವಾರ ಮಧ್ಯರಾತ್ರಿ ಅದ್ಧೂರಿಯಾಗಿ ಜರುಗಿತು. ಈ ಪ್ರಸಿದ್ಧ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಪುನೀತರಾದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.
ಝಗಮಗಿಸುವ ಬೆಳಕು, ಓಲಗದ ಸದ್ದು, ತಡರಾತ್ರಿ ಮಲ್ಲಿಗೆಯ ಪರಿಮಳ ಇಡೀ ಬೆಂಗಳೂರನ್ನೇ ಆವರಿಸಿತ್ತು. ಪ್ರತಿಬಾರಿಯಂತೆ ಈಗೂ ಸಹ ಧರ್ಮರಾಯನ ದೇಗುಲದ ಅರ್ಚಕ ಜ್ಞಾನೇಂದ್ರ ಧರ್ಮರಾಯನ ಕರಗವನ್ನು ಹೊತ್ತುಕೊಂಡಿದ್ದರು. ರಾತ್ರಿ 12.30ಕ್ಕೆ ಕರಗ ದೇವಾಲಯದಿಂದ ಹೊರಡಿತು. ವೀರಕುಮಾರರ ಖಡ್ಗದ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಸರ್ವಧರ್ಮ ಸೌಹಾರ್ದತೆಗೆ ಸಾಕ್ಷಿಯಾದ ಕರಗ ಎಂದಿನಂತೆ ಮುಸ್ಲಿಮರ ದರ್ಗಾ ಹಾಗೂ ಮಸೀದಿಗೂ ಸಹ ತೆರಳಿ ಪೂಜೆ ಸ್ವೀಕರಿಸಿತು.
ಇನ್ನು ಈ ಬಾರಿಯ ಕರಗ ಮಹೋತ್ಸವದ ವಿಶೇಷ ಅಂದ್ರೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ ವೀರೇಂದ್ರ ಹೆಗ್ಗಡೆ ಭಾಗಿಯಾಗಿರೋದು. ಇದೇ ಮೊದಲ ಬಾರಿಗೆ ವೀರೇಂದ್ರ ಹೆಗ್ಗಡೆ ಅವರು ದ್ರೌಪದಿ ದೇವಿಯ ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು
ಶಾಕ್ತ್ಯ ಪಂಥದ ಆರಾಧನೆಯಾಗಿರುವ ಈ ಕರಗದಲ್ಲಿ ಹನ್ನೊಂದು ದಿನವೂ ನೈವೇದ್ಯಕ್ಕೆ ಬಳಸುವ ಪದಾರ್ಥಗಳನ್ನು ಸ್ತ್ರೀಯರೇ ತಯಾರಿಸುವುದು ಮತ್ತೊಂದು ವಿಶೇಷ. ಜತೆಗೆ ಕರಗ ಹಾಗೂ ವೀರಕುಮಾರರ ಮೇಲೆ ಪುಷ್ಪವೃಷ್ಟಿ ನಡೆಸಲು ದುಂಡುಮಲ್ಲಿಗೆಯನ್ನು ಮಾತ್ರ ಬಳಸುತ್ತಾರೆ. ಮಲ್ಲಿಗೆ ಹೊರತು ಪಡಿಸಿ ಬೇರಾವ ಹೂವಿಗೂ ಪ್ರಾಧಾನ್ಯತೆಯಿಲ್ಲ.
ಏ.3 ರಿಂದ ಆರಂಭವಾಗಿರುವ ಕರಗ ಮಹೋತ್ಸವ ಏ.8 ರ ಶನಿವಾರದಂದು ಮುಕ್ತಾಯಗೊಳ್ಳಲಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಈಗಾಗಲೇ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.