ಬೈಕ್ ಟ್ಯಾಕ್ಸಿ ಅಗ್ರಿಗೇಟರ್‍ಗಳ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿ ಆಟೋ ಚಾಲಕರ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ನಮ್ಮ ಅನ್ನವನ್ನು ಕಸಿದುಕೊಳ್ಳಲಾಗುತ್ತಿದ್ದು, ಇದರಿಂದ ನಮ್ಮ ಆದಾಯದ ಮೇಲೆ ತೀವ್ರ ಹೊಡೆತ ಉಂಟಾಗಿದೆ. ಬೈಕ್ ಟ್ಯಾಕ್ಸಿಗಳಿಗೆ ಯಾವುದೇ ಕಾನೂನು, ಕಾಯಿದೆ, ಸುರಕ್ಷತೆ ಇಲ್ಲದಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಆಟೋ ಚಾಲಕರ ಸಂಘಟನೆಗಳು ಆರೋಪಿಸಿದ್ದಾರೆ.
ಕೂಡಲೇ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‍ಗಳನ್ನು ನಿಷೇಧಿಸಲು ಒತ್ತಾಯಿಸಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ಸಂಘಟನೆಗಳು ನಿರ್ಧರಿಸಿವೆ.
ಇನ್ನು ಆಟೋ ಚಾಲಕರ ಸಂಘಟನೆಗಳಲ್ಲೇ ಹಲವು ಭಿನ್ನಮತಗಳು ಕಾಣಿಸಿಕೊಂಡಿದೆ. ಹಬ್ಬದ ಸಂದರ್ಭದಲ್ಲಿ ಸುಖಾಸುಮ್ಮನೆ ಆದಾಯವನ್ನು ಬಿಡುವುದು ಆಟೋ ಚಾಲಕರ ಆರ್ಥಿಕತೆ ದೃಷ್ಟಿಯಿಂದ ಸರಿಯಲ್ಲ ಎಂದಿರುವ ಹಲವು ಸಂಘಟನೆಗಳು ಇಂದು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಯಾತ್ರಿ ಮುಂತಾದ ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಲು ನಿರಾಕರಿಸಿವೆ.
ಮತ್ತೊಂದೆಡೆ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ್ಯಾಪಿಡೋ ಚಾಲಕರೂ ಸಹ ಆಟೋ ಚಾಲಕರ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಯಾವುದೋ ಒಂದು ರೀತಿಯಲ್ಲಿ ಸ್ವಾವಲಂಬನೆ ಬಯಸುವ ನಮ್ಮಂಥ ಯುವಕರ ಮೇಲೆ ಹಲ್ಲೆ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ ಎಂದಿದ್ದಾರೆ.