ಬಿಹಾರ: ರಾಮನವಮಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳು ಪ್ರಿ ಪ್ಲ್ಯಾನ್ಡ್ ಆಗಿದ್ದು, ಇದರ ರೂವಾರಿ ಬಜರಂಗದಳದ ನಾಯಕ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
456 ಸದಸ್ಯರಿರುವ ವಾಟ್ಸಾಪ್ ಗ್ರೂಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಬಜರಂಗದಳದ ನಾಯಕ ಕುಂದನ್ ಕುಮಾರ್ ಮತ್ತು ಇತರ ಆರೋಪಿಗಳು ಗಲಭೆಗೆ ಷಡ್ಯಂತ್ರಗಳನ್ನು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನವಮಿ ಆಚರಣೆಗೂ ಕೆಲ ದಿನಗಳ ಹಿಂದಷ್ಟೇ ವಾಟ್ಸಪ್ ಗ್ರೂಪ್ ರಚಿಸಲಾಗಿದ್ದು, ಕುಂದನ್ ಕುಮಾರ್ ಈ ಗ್ರೂಪ್ ನ ಅಡ್ಮಿನ್ ಆಗಿದ್ದ.
ವಾಟ್ಸಾಪ್ ಗ್ರೂಪ್ ನಲ್ಲಿ ಗಲಭೆಗಳನ್ನು ಹರಡಲು ಷಡ್ಯಂತ್ರಗಳನ್ನು ನಡೆಸಲಾಗಿತ್ತು ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿ ಸುಳ್ಳು, ನಕಲಿ ಪೋಸ್ಟ್ ಗಳನ್ನು ಹರಡಲಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಬೇರೆ ಸಮುದಾಯಗಳನ್ನು ಗುರಿಯಾಗಿಸಿ ನಕಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಕೂಡ ಈ ಗ್ರೂಪನ್ನು ಬಳಸಲಾಗಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. 15 ಜನರ ವಿರುದ್ಧ ಈ ಬಗ್ಗೆ ಪ್ರಕರಣದ ದಾಖಲಾಗಿದೆ, ಐದು ಜನರನ್ನು ಬಂಧಿಸಲಾಗಿದೆ.