ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರ (Jaya Mrityunjay swamiji) ವಿರುದ್ಧ ಬೆಂಗಳೂರಿನ (Bengaluru) ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ (Sexual harassment) ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಪ್ರಕರಣವು ಈಗ ಕಾನೂನು ಸ್ವರೂಪ ಪಡೆದಿದೆ. ಆದ್ರೆ ಈಗ ಆರೋಪ ಮಾಡಿದ್ದ ಮಹಿಳೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, ಸದ್ಯ ಮಹಿಳೆ ಎಲ್ಲಿದ್ದಾರೆ, ಯಾರ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಈ ಆರೋಪಗಳನ್ನು ಕಟುವಾಗಿ ನಿರಾಕರಿಸಿರುವ ಶ್ರೀಗಳು, ಇದೊಂದು ವ್ಯವಸ್ಥಿತ ಸಂಚು ಎಂದು ಪ್ರತಿಕ್ರಿಯಿಸಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಸಮರ್ಥಿಸಿಕೊಂಡಿರುವ ಅವರು, ಹನಿಟ್ರ್ಯಾಪ್ ಮೂಲಕ ತಮ್ಮ ತೇಜೋವಧೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿಜಯಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಈಗಾಗಲೇ ಪ್ರತಿದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಪಂಚಮಸಾಲಿ ಪೀಠದಲ್ಲಿ ಭುಗಿಲೆದ್ದ ವಿವಾದ: ಸ್ವಾಮೀಜಿ ವಿರುದ್ಧ ಶಾಸಕ ಕಾಶಪ್ಪನವರ್ ಕೆಂಡ
ಈ ಮಹಿಳೆ ಅನಾಥಾಶ್ರಮದ ಹೆಸರಿನಲ್ಲಿ ಪರಿಚಯ ಮಾಡಿಕೊಂಡು, ನಂತರ ತಮ್ಮನ್ನು ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ಸ್ವಾಮೀಜಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಈ ಪ್ರಕರಣದ ಹಿಂದೆ 3 ಕೋಟಿ ರೂಪಾಯಿಗಳ ಬೃಹತ್ ಬೇಡಿಕೆಯಿದ್ದು, ತಮ್ಮ ಘನತೆಗೆ ಕುಂದು ತರಲು ಈ ಬ್ಲಾಕ್‌ಮೇಲ್ ತಂತ್ರ ಹೂಡಲಾಗಿದೆ ಎಂಬುದು ಶ್ರೀಗಳ ಪ್ರಮುಖ ಆರೋಪ. ಸದ್ಯ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.