ಖಾಸಗಿ ಬೈಕ್ ಟ್ಯಾಕ್ಸಿ ಸರ್ವೀಸ್ ನೀಡುತ್ತಿರುವ ರಾಪಿಡೋ ವಿರುದ್ಧ ಬೆಂಗಳೂರಿನ ಆಟೋ ಚಾಲಕರು ಸಿಡಿದೆದ್ದಿದ್ದಾರೆ.
ಬೈಕ್ ಟ್ಯಾಕ್ಸಿ ನಿಷೇಧಿಸಬೇಕೆಂದು ಆಗ್ರಹಿಸಿ ಮಾರ್ಚ್ ೨೦ರಂದು ಆಟೋ ಸೇವೆ ಬಂದ್ ಮಾಡಿ ಪ್ರತಿಭಟಿಸಲು ಆಟೋ ಚಾಲಕರ ಯೂನಿಯನ್ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್, ರಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದರಿಂದ ಆಟೋ ಚಾಲಕರ ಆದಾಯಕ್ಕೆ ಪೆಟ್ಟು ಬೀಳುತ್ತಿದೆ. ಈಗಾಗಲೇ ಓಲಾ, ಊಬರ್ ನಿಂದಲೂ ನಾವು ತೊಂದರೆಗೊಳಗಾಗಿದ್ದೇವೆ. ಇದೀಗ ಬೈಕ್ ಟ್ಯಾಕ್ಸಿಗೂ ಅನುಮತಿ ನೀಡಿರೋದು ಆಟೋ ಚಾಲಕರಿಗೆ ಹೆಚ್ಚಿನ ತೊಂದರೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಆಟೋ ಮುಷ್ಕರಕ್ಕೆ ನಿರ್ಧರಿಸಿದ್ದೇವೆ ಎಂದ್ರು.
ಮಾರ್ಚ್ 16 ರಿಂದ 2 ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಧರಿಸಿ ಆಟೋ ಚಲಾಯಿಸುತ್ತೇವೆ. 2 ದಿನಗಳ ನಮ್ಮ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ರೆ 20ನೇ ತಾರೀಕು ೨.೧೦ ಲಕ್ಷ ಆಟೋಗಳು ಸಂಚಾರ ಬಂದ್ ಮಾಡಲಿದೆ , ಅದಲ್ಲದೇ ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕೋದಾಗಿಯೂ ಎಚ್ಚರಿಕೆ ನೀಡಿದ್ರು.