ರ್ಯಾಪಿಡೋ ಮುಂತಾದ ಅಗ್ರಿಗೇಟರ್ ಆ್ಯಪ್‍ಗಳನ್ನು ರದ್ದುಪಡಿಸಲು ಒತ್ತಾಯಿಸಿ ಇಂದು ಬೆಂಗಳೂರಿನಲ್ಲಿ ಆಟೋ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆ ಇಂದೂ ಸಹ ಕಾರ್ಯನಿರ್ವಸಿದ ಆಟೋ ಚಾಲಕನೊಬ್ಬನನ್ನು ತಡೆದು ಹೂವಿನ ಹಾರ ಹಾಕಿ ಸನ್ಮಾನದ ನೆಪದಲ್ಲಿ ಅಪಮಾನಿಸಿರುವ ಘಟನೆ ನಾಯಂಡನಹಳ್ಳಿ ವೃತ್ತದ ಬಳಿ ನಡೆದಿದೆ.
ಆಟೋ ಚಾಲಕರ ಸಂಘಟನೆಗಳು ಆಟೋ ಬಂದ್‍ಗೆ ಕರೆ ನೀಡಿದ್ದರೂ ನಮ್ಮ ಯಾತ್ರಿ ಸೇರಿದಂತೆ ಹಲವು ಸಂಘಟನೆಗಳು ಈ ಮುಷ್ಕರಕ್ಕೆ ಸಮ್ಮತಿ ನೀಡಿಲ್ಲ. ಒಂದು ದಿನದ ಆದಾಯವನ್ನೂ ಕಳೆದುಕೊಳ್ಳಲಾರದಂಥಾ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ಹಲವು ಆಟೋ ಚಾಲಕರ ಅಳಲಾಗಿದೆ. ಹೀಗಾಗಿ ಎಷ್ಟೋ ಆಟೋ ಚಾಲಕರು ಇಂದು ಸ್ವಯಂಪ್ರೇರಿತವಾಗಿ ಎಂದಿನಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ. ಆದರೆ ಇದನ್ನೇ ಗುರಿಯಾಗಿರಿಸಿಕೊಂಡು ಪ್ರತಿಭಟನಾ ನಿರತ ಆಟೋಚಾಲಕರ ಸಂಘಟನೆಗಳು ಸಾರ್ವಜನಿಕವಾಗಿ ಅವರಿಗೆ ಅಪಮಾನಗೊಳಿಸುವ ಕಾರ್ಯದಲ್ಲಿ ತೊಡಗಿದೆ ಎಂಬ ಆರೋಪ ಕೇಳಿಬಂದಿದೆ.
ಇಂದು ನಾಯಂಡನ ಹಳ್ಳಿ ವೃತ್ತದಲ್ಲಿ ಹಾರ ಹಾಕಿ ಸನ್ಮಾನಿಸಿದ ಗುಂಪು ಆಟೋ ಚಾಲಕನ ಮನವಿಯನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳಲಿಲ್ಲ. ಪರಿಚಿತ ಹೆಣ್ಣುಮಗಳು ಆಸ್ಪತ್ರೆಗೆ ಹೋಗಬೇಕಿತ್ತು ಎಂಬ ಕಾರಣವನ್ನೂ ಲೆಕ್ಕಿಸದೆ, ಸ್ವತಃ ನಿಮ್ಮ ಕೆಲಸಕ್ಕೂ ಇವತ್ತು ಆಟೋ ತೆಗೆಯಬಾರದೆಂದು ಧಮಕಿ ಹಾಕಿದ್ದಾರೆ. ಬಳಿಕ ಹೂವಿನ ಹಾರ ಹಾಕಿ ಅದನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.