ಬೆಂಗಳೂರು:ಅಟ್ಟಿಕಾ ಗೋಲ್ಡ್ (Attica Gold) ಕಂಪನಿಯೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸುಳ್ಳು ಪ್ರಮಾಣಪತ್ರ (Certificate ) ಸಲ್ಲಿಕೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಕಂಪನಿಯ ಪಿ.ಎಸ್. ಆಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು (Attica babu )ಅವರಿಗೆ ಕರ್ನಾಟಕ ಹೈಕೋರ್ಟ್ (High Court ) ನೋಟಿಸ್ ಜಾರಿ ಮಾಡಿದೆ.
ಮಾಜಿ ನೌಕರರ ವಿರುದ್ಧ ಚಿನ್ನ ಕಳ್ಳತನದ ಆರೋಪ ಹೊರಿಸಿ ಬಾಬು ದಾಖಲಿಸಿದ್ದ ಎಫ್‌ಐಆರ್‌ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತಡೆ ನೀಡಿದೆ. ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಮಾಜಿ ನೌಕರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?
ಬಾಬು ಅವರು ಈ ಹಿಂದೆ ತಮಗೆ ಅಟ್ಟಿಕಾ ಗೋಲ್ಡ್‌ನೊಂದಿಗೆ ಸಂಬಂಧವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಮಾಜಿ ನೌಕರರ ವಿರುದ್ಧ ನೀಡಿದ ದೂರಿನಲ್ಲಿ ತಾನೇ ಮಾಲೀಕ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲು ಕೋರಲಾಗಿತ್ತು.
ಇದೀಗ ನ್ಯಾಯಾಲಯವು, ಬಾಬು ಅವರು ಎಲ್ಲೆಲ್ಲಿ ಇಂತಹ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ದಾಖಲೆಗಳನ್ನು ಹಾಜರುಪಡಿಸುವಂತೆ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರಿಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ.
ಇದನ್ನೂ ಓದಿ : ಜೈಲಿನಲ್ಲಿದ್ದರೂ ಆಸ್ತಿ ಹಕ್ಕಿದೆ : ವಿಚಾರಣಾಧೀನ ಕೈದಿಗಳಿಗೆ ಹೈಕೋರ್ಟ್ ಆದೇಶದ ಆಶಾಕಿರಣ!