Saturday, May 16, 2026
Homeಟಾಪ್ ನ್ಯೂಸ್BIG NEWS : ಕ್ರೂಸ್ ಹಡಗಿನಲ್ಲಿ ಆತಂಕ ಮೂಡಿಸಿದ ಹಂಟಾವೈರಸ್ - ವಿಶ್ವ ಆರೋಗ್ಯ ಸಂಸ್ಥೆಯ...

BIG NEWS : ಕ್ರೂಸ್ ಹಡಗಿನಲ್ಲಿ ಆತಂಕ ಮೂಡಿಸಿದ ಹಂಟಾವೈರಸ್ – ವಿಶ್ವ ಆರೋಗ್ಯ ಸಂಸ್ಥೆಯ ಕಳವಳ

ದೆಹಲಿ: ಅಟ್ಲಾಂಟಿಕ್(Atlantic) ಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಐಷಾರಾಮಿ ಕ್ರೂಸ್ ಹಡಗೊಂದರಲ್ಲಿ ಭೀತಿ ಹುಟ್ಟಿಸುವ ಹಂಟಾವೈರಸ್ (Hantavirus) ಸೋಂಕು ಪತ್ತೆಯಾಗಿದ್ದು, ಇದು ಅತ್ಯಂತ ಅಪರೂಪದ ರೀತಿಯಲ್ಲಿ ಮನುಷ್ಯನಿಂದ ಮನುಷ್ಯನಿಗೆ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಆತಂಕ ವ್ಯಕ್ತಪಡಿಸಿದೆ.‌ ಹಂಟಾವೈರಸ್ ಸೋಂಕಿಗೆ ಕನಿಷ್ಠ ಮೂವರು ಬಲಿಯಾಗಿದ್ದು, ಹಲವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಸಾಮಾನ್ಯವಾಗಿ ಹಂಟಾವೈರಸ್ ಸೋಂಕು ಇಲಿಗಳ ಮೂತ್ರ, ಮಲ ಅಥವಾ ಜೊಲ್ಲಿನ ಸಂಪರ್ಕಕ್ಕೆ ಬರುವುದರಿಂದ ಮನುಷ್ಯರಿಗೆ ಹರಡುತ್ತದೆ.

ಆದರೆ ಈ ಕ್ರೂಸ್ ಹಡಗಿನಲ್ಲಿ ಪತ್ತೆಯಾಗಿರುವ ಪ್ರಕರಣಗಳು ನೇರವಾಗಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಶಂಕಿಸಿದ್ದಾರೆ. ಈ ಬೆಳವಣಿಗೆಯು ಜಾಗತಿಕ ಆರೋಗ್ಯ ಇಲಾಖೆಗಳಲ್ಲಿ ಆತಂಕ ಮೂಡಿಸಿದ್ದು, ಹಡಗಿನಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಹಂಟಾವೈರಸ್ ಶ್ವಾಸಕೋಶ ಮತ್ತು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುವ ಅತ್ಯಂತ ಪ್ರಾಣಾಂತಿಕ ಕಾಯಿಲೆಯಾಗಿದ್ದು, ಈ ಹೊಸ ಮಾದರಿಯ ಹರಡುವಿಕೆ ಕುರಿತು ತಜ್ಞರು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.

ಹಡಗಿನಲ್ಲಿದ್ದ ಪ್ರಯಾಣಿಕರಲ್ಲಿ ಹಠಾತ್ ಆಗಿ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ರೋಗ ಹರಡುತ್ತಿರುವುದು ಬೆಳಕಿಗೆ ಬಂದಿದೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅಸ್ವಸ್ಥಗೊಂಡ ಕೆಲವು ಪ್ರಯಾಣಿಕರನ್ನು ತುರ್ತಾಗಿ ದಕ್ಷಿಣ ಆಫ್ರಿಕಾದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಳಿದ ಪ್ರಯಾಣಿಕರನ್ನು ಹಡಗಿನಲ್ಲೇ ಪ್ರತ್ಯೇಕವಾಗಿ (Isolation) ಇರಿಸಲಾಗಿದ್ದು, ಅಂತರರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹಲವು ಅಧ್ಯಯನಗಳು ಮತ್ತು ತನಿಖೆಗಳ ಪ್ರಕಾರ, ಈ ನಿರ್ದಿಷ್ಟ ತಳಿಯಿಂದ ಸೀಮಿತ ಪ್ರಮಾಣದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡಲು ಸಾಧ್ಯವಿದೆ. ರೋಗಿಯ ಆರೈಕೆ ಮಾಡುವಾಗ ಅಥವಾ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವಾಗ ಉಂಟಾಗುವ ನಿಕಟ ಸಂಪರ್ಕದ ಮೂಲಕ ಈ ರೋಗ ಹರಡುತ್ತದೆ. ಮುಖ್ಯವಾಗಿ ಸೋಂಕಿತರ ಉಸಿರಾಟದ ಹನಿಗಳು (Respiratory Droplets) ಅಥವಾ ದೇಹದ ದ್ರವಗಳ ಸಂಪರ್ಕಕ್ಕೆ ಬರುವುದರಿಂದ ಇದು ಒಬ್ಬರಿಂದ ಮತ್ತೊಬ್ಬರಿಗೆ ತಗುಲಬಹುದು. ಪ್ರಸ್ತುತ ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಹಿಂದೆ ಇದೇ ಅಪಾಯಕಾರಿ ತಳಿ ಇರುವ ಸಾಧ್ಯತೆ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಈ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಸಿಬಿಎಸ್‌ಸಿ ಮಹತ್ವದ ನಿರ್ಧಾರ – 6ನೇ ತರಗತಿ ವಿದ್ಯಾರ್ಥಿಗಳಿಗೆ ‘R3 ಭಾಷಾ ನಿಯಮ’ ಕಡ್ಡಾಯ ಜಾರಿ

ಹೆಚ್ಚಿನ ಸುದ್ದಿ

Change Language »
error: Content is protected !!