Saturday, May 16, 2026
Homeಟಾಪ್ ನ್ಯೂಸ್HIMANTA BISWA SARMA: ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ! ಮೇ 12ಕ್ಕೆ...

HIMANTA BISWA SARMA: ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ! ಮೇ 12ಕ್ಕೆ ‘ನವ’ ಸರ್ಕಾರದ ಸಾರಥಿಗೆ ಪಟ್ಟಾಭಿಷೇಕ?

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಹೊಸ ಸರ್ಕಾರದ ರಚನೆಯ ಪ್ರಕ್ರಿಯೆಗಳು ಆರಂಭವಾಗಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಬುಧವಾರ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಗುವಾಹಟಿಯ ಲೋಕ ಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾದ ಶರ್ಮಾ, ತಮ್ಮ ಸಚಿವ ಸಂಪುಟದ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.

ಹಂಗಾಮಿ ಮುಖ್ಯಮಂತ್ರಿಯಾದ ಶರ್ಮಾ
ರಾಜೀನಾಮೆಯನ್ನು ಅಂಗೀಕರಿಸಿರುವ ರಾಜ್ಯಪಾಲರು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಶರ್ಮಾ ಅವರಿಗೆ ಸೂಚಿಸಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ಕಳೆದ ಐದು ವರ್ಷಗಳ ಕಾಲ ಮಾರ್ಗದರ್ಶನ ನೀಡಿದ ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ಸರ್ಕಾರ ರಚನೆಯಾಗುವವರೆಗಿನ ಈ ಸಂಕ್ರಮಣ ಅವಧಿಯಲ್ಲಿ ಆಡಳಿತ ಸುಸೂತ್ರವಾಗಿ ನಡೆಯಲು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಈ ಬಾರಿಯೂ ಹಿಮಂತ ಬಿಸ್ವ ಶರ್ಮಾ ಅವರೇ ಅಸ್ಸಾಂನ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಮೇ 12 ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಈಗಾಗಲೇ ಕೇಂದ್ರ ವೀಕ್ಷಕರಾಗಿ ಜೆ.ಪಿ. ನಡ್ಡಾ ಮತ್ತು ನಯಾಬ್ ಸಿಂಗ್ ಸೈನಿ ಅವರನ್ನು ನೇಮಕ ಮಾಡಿದೆ.

ವೀಕ್ಷಕರು ವಾರಾಂತ್ಯದೊಳಗೆ ಅಸ್ಸಾಂಗೆ ಆಗಮಿಸಲಿದ್ದು, ಆ ಬಳಿಕ ನಡೆಯುವ ಶಾಸಕರ ಸಭೆಯಲ್ಲಿ ಅಧಿಕೃತವಾಗಿ ನಾಯಕನ ಆಯ್ಕೆ ನಡೆಯಲಿದೆ. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ಶೀಘ್ರದಲ್ಲೇ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ. ಅಲ್ಲಿಯವರೆಗೆ ಸಾರ್ವಜನಿಕರು ತಾಳ್ಮೆಯಿಂದ ಇರಬೇಕು ಎಂದು ಶರ್ಮಾ ಮನವಿ ಮಾಡಿದ್ದಾರೆ. ಸದ್ಯ ಅಸ್ಸಾಂನಲ್ಲಿ ಕೇಸರಿ ಪಡೆಯ ಸಂಭ್ರಮ ಮನೆಮಾಡಿದ್ದು, ಎರಡನೇ ಬಾರಿಗೆ ಶರ್ಮಾ ಅಧಿಕಾರಕ್ಕೇರುವುದನ್ನು ನೋಡಲು ಕಾರ್ಯಕರ್ತರು ಕಾತುರರಾಗಿದ್ದಾರೆ.

ಇದನ್ನೂ ಓದಿ : ಅಸ್ಸಾಂನಲ್ಲಿ ಎನ್‌ಡಿಎ ಐತಿಹಾಸಿಕ ಜಯ, ನಿಜ ಆಯ್ತು ಹಿಮಂತ್ ಬಿಸ್ವಾ ಶರ್ಮಾ ಭವಿಷ್ಯವಾಣಿ

ಹೆಚ್ಚಿನ ಸುದ್ದಿ

Change Language »
error: Content is protected !!