ನಾಳೆ ಒಂದು ವೇಳೆ ನನ್ನನ್ನು ಅನರ್ಹಗೊಳಿಸಿದರೆ ಬಿಜೆಪಿ ಶಾಸಕರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುವುದಿಲ್ಲ. ನಾವು ಹೈಕೋರ್ಟ್, ಸುಪ್ರೀಂ ಕೋರ್ಟ್, ಸೆಷನ್ ಕೋರ್ಟ್ ಗೆ ತೆರಳಿ ನ್ಯಾಯ ಕೇಳುತ್ತೇವೆ. ಆದರೆ ಎಂದಿಗೂ ನ್ಯಾಯಾಂಗ ವ್ಯವಸ್ಥೆಯನ್ನು ಧಿಕ್ಕರಿಸುವ ಕೆಲಸ ಮಾಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಟೀಕಿಸಿದ್ದಾರೆ.
ಗುರುವಾರ ಅಸ್ಸಾಂ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್ ಸಂಸತ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಆಕ್ಷೇಪಿಸುತ್ತಾ ಈ ರೀತಿಯ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು.
ನೀವು ಸೂರತ್ ಉನ್ನತ ನ್ಯಾಯಾಲಯದ ನ್ಯಾಯಾಧೀಶರಾದ ಪಟ್ನಾಯಕ್, ಮುಖ್ಯೋಪಾಧ್ಯಾಯ ಅವರ ತೀರ್ಪನ್ನು ಟೀಕಿಸುತ್ತಿದ್ದೇರೆಯೇ? ಎಂದು ಕಟುವಾಗಿ ಪ್ರಶ್ನಿಸಿದ ಹಿಮಂತ ಬಿಸ್ವ ಸರ್ಮ, ನ್ಯಾಯಾಂಗ ವ್ಯವಸ್ಥೆ ಎಂಬುದು ಎರಡು ಅಲಗಿನ ಕತ್ತಿಯಿದ್ದಂತೆ. ಕೆಲವೊಮ್ಮೆ ನಮಗೆ ಪರವಾಗಿ ತೀರ್ಪು ಬರಬಹುದು. ಕೆಲವೊಮ್ಮೆ ನಮಗೆ ವಿರೋಧವಾಗಿ ತೀರ್ಪು ಬರಬಹುದು. ಆದರೆ ಕಾಂಗ್ರೆಸ್ ವರ್ತನೆ ಸರಿಯಿಲ್ಲ ಎಂದು ಆಕ್ಷೇಪಿಸಿದ್ದಾರೆ.