ಬೆಂಗಳೂರು: ಚುನಾವಣೆಯು ಹೊಸ್ತಿಲಿನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಶಾಕ್ ಎದುರಾಗಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆಸಿಫ್ ಸೇಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಕಾಳಜಿಯಿಲ್ಲದಿರುವುದೇ ಬಿಜೆಪಿ ತೊರೆಯಲು ಕಾರಣ ಎಂದಿದ್ದಾರೆ.
ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು 15 ವರ್ಷಗಳ ಕಾಲ ಸಕ್ರಿಯವಾಗಿ ದುಡಿದರೂ ಸಹ ಬಿಜೆಪಿ ಯಾವುದೇ ಸ್ಥಾನಮಾನ ನೀಡಿಲ್ಲ. ಸಮುದಾಯದ ಅಜಾನ್ ಹಕ್ಕು ಕಸಿದರು, ಹಿಜಾಬ್ ವಿವಾದವೆಬ್ಬಿಸಿದರು, ಹಲಾಲ್ ವಿವಾದಕ್ಕೆ ಕಾರಣರಾದರು ಈಗ ಮುಸ್ಲಿಂ ಮೀಸಲಾತಿಯನ್ನು ಕಿತ್ತುಕೊಂಡಿದ್ದಾರೆ. ಬಿಜೆಪಿ ಪಕ್ಷವು ಮುಸ್ಲಿಮರ ಮಕ್ಕಳು ವೈದ್ಯರಾಗಲೀ, ಪೊಲೀಸ್ ಅಧಿಕಾರಿಯಾಗಲೀ, ಎಂಜಿನಿಯರ್ ಆಗಲಿ ಎಂದು ಬಯಸುವುದಿಲ್ಲ. ಬದಲಾಗಿ ಮುಸ್ಲಿಮರೆಂದರೆ ಸದಾ ಪಂಚರ್ ಅಂಗಡಿ, ಗುಜರಿ ಅಂಗಡಿ, ಮಾಂಸದ ಅಂಗಡಿಗಳಿಗೇ ಸೀಮಿತವಾಗಿ ಇರಿಸಿದೆ. ಸಮುದಾಯದ ಅಭಿವೃದ್ಧಿಗೆ ಯಾವ ಕ್ರಮವನ್ನೂ ಪಕ್ಷ ಕೈಗೊಳ್ಳುತ್ತಿಲ್ಲ. ಇಂಥಾ ನಡವಳಿಕೆಯಿಂದ ಬೇಸತ್ತು ಬಿಜೆಪಿ ಪಕ್ಷವನ್ನು ಬಿಡುತ್ತಿದ್ದೇನೆ ಎಂದರು.
ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಅವರು ಯಾರು ಮುಸ್ಲಿಂ ಸಮುದಾಯದ ಪರವಾಗಿ ಕೆಲಸ ಮಾಡುತ್ತಾರೋ ಅವರಿಗೆ ನನ್ನ ಬೆಂಬಲ ಎಂದಿದ್ದಾರೆ.