ರಾಹುಲ್ ಗಾಂಧಿ ಅವರ ʼಮೋದಿ ಸರ್‌ನೇಮ್ʼ ಹೇಳಿಕೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ಬರುತ್ತಿದ್ದಂತೆ, ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರ ಹಳೆಯ ಟ್ವೀಟ್ ಒಂದು ಚರ್ಚೆಗೆ ಕಾರಣವಾಗಿದೆ.
ಮೋದಿ ಎಂದರೆ ಭ್ರಷ್ಟಾಚಾರ, ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರವೆಂದು ಬದಲಾಯಿಸೋಣ ಎಂದು ಖುಷ್ಬೂ ಸುಂದರ್ 2018 ರಲ್ಲಿ ಹಾಕಿದ್ದ ಟ್ವೀಟ್ ಅನ್ನು ಉಲ್ಲೇಖಿಸಿ ರಾಹುಲ್ ಅಭಿಮಾನಿಗಳು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದು, ನಿಮ್ಮ ನಾಯಕಿಯ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ತನ್ನ ಹಳೆಯ ಟ್ವೀಟ್ ಚರ್ಚೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಖುಷ್ಬು, “ಕಾಂಗ್ರೆಸ್ ಎಷ್ಟು ಹತಾಶಗೊಂಡಿದೆ ಎಂದರೆ, ನನ್ನ ಹಳೆಯ ಟ್ವೀಟ್ ಅನ್ನು ಅದು ಎಳೆದು ತರುತ್ತಿದೆ. ಆದರೆ, ಅದು ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಹಾಕಿದ ಪೋಸ್ಟ್. ‘ಮೋದಿ’ ಬಗೆಗಿನ ಟ್ವೀಟ್‌ಗೆ ನಾನು ನಾಚಿಕೆಪಡುವುದಿಲ್ಲ, ಯಾಕೆಂದರೆ, ನಾನು ನಾಯಕನನ್ನು ಅನುಸರಿಸುತ್ತಿದ್ದೆ ಹಾಗೂ ಪಕ್ಷದ ಭಾಷೆಯಲ್ಲಿ ಮಾತನಾಡುತ್ತಿದ್ದೆ” ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ನಟಿ ಖುಷ್ಬೂ ಸುಂದರ್ ಅವರು 2020 ರಲ್ಲಿ ಕಾಂಗ್ರೆಸ್ ತೊರೆದ ನಂತರ ಬಿಜೆಪಿಗೆ ಸೇರಿದ್ದರು.