Saturday, May 16, 2026
Homeಟಾಪ್ ನ್ಯೂಸ್ARVIND KEJRIWAL: RSS ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ, ವಿಚಾರಣೆಯಿಂದ ಹಿಂದೆ ಸರಿಯಬೇಕು: ಕೋರ್ಟ್​​​ನಲ್ಲಿ ಕೇಜ್ರಿವಾಲ್​ ವಾದ

ARVIND KEJRIWAL: RSS ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ, ವಿಚಾರಣೆಯಿಂದ ಹಿಂದೆ ಸರಿಯಬೇಕು: ಕೋರ್ಟ್​​​ನಲ್ಲಿ ಕೇಜ್ರಿವಾಲ್​ ವಾದ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಸೋಮವಾರ ಮಹತ್ವದ ಬೆಳವಣಿಗೆ ನಡೆದಿದ್ದು, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ನ್ಯಾಯಪೀಠದ ಮೇಲೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ವಿಚಾರಣೆಯಲ್ಲಿ ತಮಗೆ ನಿಷ್ಪಕ್ಷಪಾತ ನ್ಯಾಯ ಸಿಗುವ ಬಗ್ಗೆ ಆತಂಕವಿದೆ ಎಂದು ಹೇಳಿರುವ ಕೇಜ್ರಿವಾಲ್, ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದಾರೆ.

ನ್ಯಾಯಾಧೀಶರ ಮೇಲೆ ಅನುಮಾನ ಎಂದ ಕೇಜ್ರಿವಾಲ್‌
ಇದೇ ವೇಳೆ ಕೇಜ್ರಿವಾಲ್ ಅವರು ನ್ಯಾಯಮೂರ್ತಿಗಳ ರಾಜಕೀಯ ನಂಟು ಮತ್ತು ಸಿದ್ಧಾಂತದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಂಗಸಂಸ್ಥೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿ ಶರ್ಮಾ ಅವರು ಭಾಗವಹಿಸಿರುವುದನ್ನು ಕೇಜ್ರಿವಾಲ್ ಪ್ರಸ್ತಾಪಿಸಿದರು. ಈ ಇಡೀ ಪ್ರಕರಣವು ರಾಜಕೀಯ ಪ್ರೇರಿತವಾಗಿರುವುದರಿಂದ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತದ ಸಂಘಟನೆಗಳ ಜೊತೆ ನ್ಯಾಯಮೂರ್ತಿಗಳು ಗುರುತಿಸಿಕೊಂಡಿರುವುದರಿಂದ, ಈ ಪ್ರಕರಣದಲ್ಲಿ ನನಗೆ ನಿಷ್ಪಕ್ಷಪಾತವಾದ ತೀರ್ಪು ಸಿಗುತ್ತದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ನ್ಯಾಯಮೂರ್ತಿಗಳು ಈ ಕೇಸಿನಿಂದ ಹಿಂದೆ ಸರಿಯಬೇಕು ಎಂಬ ತಮ್ಮ ವಾದವನ್ನು ಮಂಡಿಸಿದ್ದಾರೆ.

ಬಹಿರಂಗ ಸಮಾರಂಭಗಳಲ್ಲಿ ಭಾಗವಹಿಸುವುದು ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವುದು ಒಬ್ಬ ನ್ಯಾಯಮೂರ್ತಿಯ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆಯೇ ಎಂದು ನ್ಯಾಯಮೂರ್ತಿ ಶರ್ಮಾ ಅವರು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದರು. ಅಂತಹ ಕಾರ್ಯಕ್ರಮಗಳಲ್ಲಿ ತಾವು ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಹೇಳಿಕೆಗಳನ್ನು ನೀಡಿದ್ದೇವೆಯೇ ಎಂದು ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಕೇಜ್ರಿವಾಲ್, “ನೀವು ಅಲ್ಲಿ ನೀಡಿದ ಹೇಳಿಕೆಗಳಿಗಿಂತ ಹೆಚ್ಚಾಗಿ, ಅಂತಹ ಸಂಘಟನೆಗಳ ಜೊತೆಗಿನ ಒಡನಾಟವೇ ಒಬ್ಬ ಸಾಮಾನ್ಯ ಅರ್ಜಿದಾರನ ಮನಸ್ಸಿನಲ್ಲಿ ಸಂಶಯ ಹುಟ್ಟಿಸಲು ಸಾಕು” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಸಂಶಯ ವ್ಯಕ್ತಪಡಿಸಿದ ಕೇಜ್ರಿವಾಲ್
ವಿಚಾರಣೆಯ ವೇಳೆ ಖುದ್ದಾಗಿ ವಾದ ಮಂಡಿಸಿದ ಕೇಜ್ರಿವಾಲ್, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಮಂಡಿಸುವ ಪ್ರತಿಯೊಂದು ವಾದವನ್ನು ನ್ಯಾಯಾಲಯವು ಒಪ್ಪಿಕೊಳ್ಳುತ್ತಿದೆ. ಈ ತನಿಖಾ ಸಂಸ್ಥೆಗಳ ಪ್ರತಿಯೊಂದು ಮನವಿಯು ನ್ಯಾಯಾಂಗದ ತೀರ್ಪಾಗಿ ಬದಲಾಗುತ್ತಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ. ಫೆಬ್ರವರಿ 27 ರಂದು ಕೆಳಹಂತದ ನ್ಯಾಯಾಲಯವು ತಮ್ಮನ್ನು ಬಿಡುಗಡೆ ಮಾಡಿ ಸುದೀರ್ಘ ಆದೇಶ ನೀಡಿತ್ತು. ಆದರೆ, ಹೈಕೋರ್ಟ್ ಮಾರ್ಚ್ 9 ರಂದು ಕೇವಲ ಅಲ್ಪ ಅವಧಿಯ ವಿಚಾರಣೆ ನಡೆಸಿ, ತಮ್ಮ ಪರವಾದ ವಾದವನ್ನು ಆಲಿಸದೆಯೇ ಕೆಳಹಂತದ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅವರು ವಾದಿಸಿದರು.

ನ್ಯಾಯ ಎಂಬುದು ಕೇವಲ ದೊರೆತರೆ ಸಾಲದು, ಅದು ದೊರೆಯುತ್ತಿದೆ ಎಂಬುದು ಸಾರ್ವಜನಿಕವಾಗಿ ಕಾಣಿಸಬೇಕು ಎಂಬ ತತ್ವವನ್ನು ಕೇಜ್ರಿವಾಲ್ ಉಲ್ಲೇಖಿಸಿದರು. ಮನೀಶ್ ಸಿಸೋಡಿಯಾ ಸೇರಿದಂತೆ ಈ ಹಗರಣದ ಇತರ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಮಾಡಿರುವ ಕೆಲವು ಕಠಿಣ ಟಿಪ್ಪಣಿಗಳು, ಆರೋಪಿಗಳು ಈಗಾಗಲೇ ಅಪರಾಧಿಗಳು ಎಂಬ ತೀರ್ಮಾನಕ್ಕೆ ನ್ಯಾಯಾಲಯ ಮೊದಲೇ ಬಂದಿದೆಯೇ ಎಂಬ ಆತಂಕವನ್ನು ಹುಟ್ಟಿಸುತ್ತಿವೆ. ಇಲಿ ಪಾಷಾಣದಂತಹ ಗಂಭೀರವಲ್ಲದ ಪುರಾವೆಗಳ ಆಧಾರದ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ಆರೋಪಗಳನ್ನು ಹೈಕೋರ್ಟ್ ಸತ್ಯವೆಂದು ನಂಬುತ್ತಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, ನ್ಯಾಯಾಲಯವು ಕೇವಲ ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುತ್ತದೆ ಮತ್ತು ಈಗ ಕೇವಲ ವಿಚಾರಣೆಯಿಂದ ಹಿಂದೆ ಸರಿಯುವ ಅರ್ಜಿಯ ಬಗ್ಗೆ ಮಾತ್ರ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು. ಆದೇಶದ ಬಗ್ಗೆ ಅಸಮಾಧಾನವಿದ್ದರೆ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದೇ ಹೊರತು, ಆದೇಶ ನೀಡಿದ ರೀತಿಯನ್ನೇ ಪ್ರಶ್ನಿಸಿ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೇಳುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. ಸದ್ಯಕ್ಕೆ ಈ ವಿಷಯದ ಕುರಿತು ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.

ಅಮಿತ್‌ ಶಾ ಹೇಳಿಕೆ ಉಲ್ಲೇಖ

ಇದೇ ವೇಳೆ ಕೇಜ್ರಿವಾಲ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿ, ಈ ಪ್ರಕರಣವು ಅಂತಿಮವಾಗಿ ಸುಪ್ರೀಂ ಕೋರ್ಟ್ ತಲುಪಬಹುದು ಎಂದು ಅವರು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿದ ನ್ಯಾಯಮೂರ್ತಿಗಳು, ರಾಜಕೀಯ ವ್ಯಕ್ತಿಗಳು ನೀಡುವ ಹೇಳಿಕೆಗಳ ಮೇಲೆ ನ್ಯಾಯಾಲಯಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಜ್ರಿವಾಲ್ ಅವರ ವಾದವನ್ನು ತೀವ್ರವಾಗಿ ವಿರೋಧಿಸಿದ ಸಿಬಿಐ, ಕೇವಲ ನ್ಯಾಯಾಂಗದ ಆದೇಶಗಳನ್ನು ಮುಂದಿಟ್ಟುಕೊಂಡು ನ್ಯಾಯಮೂರ್ತಿಗಳ ಮೇಲೆ ಪಕ್ಷಪಾತದ ಆರೋಪ ಮಾಡುವುದು ಸರಿಯಲ್ಲ ಎಂದು ವಾದಿಸಿತು.

ನ್ಯಾಯಮೂರ್ತಿಗಳು ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿಯೂ ತೀರ್ಪುಗಳನ್ನು ನೀಡಿದ್ದಾರೆ. ಕೇವಲ ಸೆಮಿನಾರ್‌ಗಳಲ್ಲಿ ಭಾಗವಹಿಸಿದ ಮಾತ್ರಕ್ಕೆ ಅವರಿಗೆ ಒಂದು ನಿರ್ದಿಷ್ಟ ಸಿದ್ಧಾಂತವಿದೆ ಎಂದು ಹೇಳಲು ಬರುವುದಿಲ್ಲ ಎಂದು ತನಿಖಾ ಸಂಸ್ಥೆ ಪ್ರತಿಪಾದಿಸಿತು. ಆದರೆ ಕೇಜ್ರಿವಾಲ್ ಅವರು ಇತಿಹಾಸವನ್ನು ನೆನಪಿಸುತ್ತಾ, “ಹಿಂದೆಲ್ಲಾ ನ್ಯಾಯಮೂರ್ತಿಗಳು ತಮ್ಮ ಬಗ್ಗೆ ಕಕ್ಷಿದಾರರಿಗೆ ಸಣ್ಣ ಸಂಶಯ ಮೂಡಿದರೂ ಅಂತಹ ಪ್ರಕರಣದ ವಿಚಾರಣೆಯಿಂದ ತಾವಾಗಿಯೇ ಹಿಂದೆ ಸರಿಯುತ್ತಿದ್ದರು. ನ್ಯಾಯದಾನ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಇದು ಅಗತ್ಯ” ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಶರ್ಮಾ ಅವರು ಈ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಪಟ್ಟು ಹಿಡಿದರು.

ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್‌ ರಿಲೀಫ್‌, ತನಿಖೆಗೆ ಸುಪ್ರೀಂ ತಡೆ

ಹೆಚ್ಚಿನ ಸುದ್ದಿ

Change Language »
error: Content is protected !!