ಹಿಂದುತ್ವವಾದಿಗಳ ತೀವ್ರ ವಿರೋಧದ ನಡುವೆಯೂ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ವೇಳೆ ಕುರಾನ್ ಪಠಣಕ್ಕೆ ಅನುಮತಿ ನೀಡಿ ಸೋಮವಾರ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ರಥದ ಎದುರು ಕುರಾನ್ ಓದುವ ಬದಲಾಗಿ ಹಿಂದೆ ಆಚರಣೆಯಲ್ಲಿದ್ದಂತೆ ದೇಗುಲದ ಮೆಟ್ಟಿಲಮೇಲೆ ಕುರಾನ್ ಓದಲು ಅವಕಾಶ ಕಲ್ಪಿಸಲಾಗಿದೆ.
ರಥೋತ್ಸವ ವೇಳೆ ಮುಸ್ಲಿಮರ ಪ್ರತಿನಿದಿಯಾಗಿ ಖಾಜಿ ಸಾಹೇಬರು ಬಂದು ದೇವಸ್ಥಾನದಿಂದ ಕೆಲವು ಮರ್ಯಾದೆ ಸ್ವೀಕಾರ ಮಾಡಿ ದೇವರಿಗೆ ವಂದನೆ ಸಲ್ಲಿಸುವ ವಾಡಿಕೆ ಇದೆ ಎಂಬ ಉಲ್ಲೇಖ ಬೇಲೂರು ಶ್ರಿ ಚನ್ನಕೇಶವ ದೇವಾಲಯದ ಮ್ಯಾನ್ಯುಯಲ್ ನಲ್ಲಿದೆ. ಅದರಂತೆ ರಥೋತ್ಸವ ದಿನದಂದು ಮೇದೂರಿನ ಖಾಜಿ ಸಾಹೇಬರ ಕುಟುಂಬ ಸದಸ್ಯರು ದೇಗುಲದಿಂದ ಗೌರವ ಕಾಣಿಕೆ ಸ್ವೀಕರಿಸಿ ದೇವರಿಗೆ ವಂದಿಸಬೇಕು. ದೇವಸ್ಥಾನಗಳಲ್ಲಿ ಹಿಂದಿನಿಂದಲೂ ನಡೆದು ಬರುತ್ತಿರುವ ರೂಢಿ ಹಾಗೂ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಹೇಳಲಾಗಿದೆ. ಮಾರ್ಚ್ 30ರಂದು ದೇಗುಲಕ್ಕೆ ಭೇಟಿ ನೀಡಿದ್ದ ಹಿರಿಯ ಆಗಮ ಪಂಡಿತರ ವರದಿ ಆಧರಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ರಥೋತ್ಸವ ವೇಳೆ ಕುರಾನ್ ಓದಲು ಅವಕಾಶ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಈಗಾಗಲೇ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದೇಗುಲದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ರಥೋತ್ಸವಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಏಪ್ರಿಲ್ 4 ಮತ್ತು 5ರಂದು ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದೆ.