ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಜಯಮೃತ್ಯುಂಜಯ ಸ್ವಾಮೀಜಿಗೆ ಕೆಲ ನಾಯಕರು ಕುಡಿದು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪ ಮಾಡಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಕುರಿತಾಗಿ ನೋವನ್ನು ತೋಡಿಕೊಂಡಿದ್ದಾರೆ. ಧಮ್ಕಿ ಯಾರು ಹಾಕುತ್ತಿದ್ದಾರೆಂದು ನಮ್ಮ ಇಡೀ ಸಮುದಾಯಕ್ಕೆ ಗೊತ್ತಿದೆ. ಮತ್ತೆ ಧಮ್ಕಿ ಹಾಕಿದರೆ ಏನು ಮಾಡಬೇಕು ಅನ್ನೋದು ಕೂಡಾ ನಮಗೆ ಗೊತ್ತಿದೆ, ಹೋರಾಟದಲ್ಲಿ ಭಾಗವಹಿಸಿದ್ದ ಕೆಲವು ನಾಯಕರೇ ಕುಡಿದು ಧಮ್ಕಿ ಹಾಕಿದ್ದಾರೆಂದು ಬೆಲ್ಲದ್ ಆರೋಪಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಲ್ಲ. ಇದು ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರ. ರಾಜಕೀಯ ಮಾಡುವುದಕ್ಕೆ ಮೀಸಲಾತಿ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಇಳಿದಿದ್ದರು ಎಂದು ಕಿಡಿಕಾರಿದ ಅವರು, ಪರೋಕ್ಷವಾಗಿ ವಿನಯ್ ಕುಲಕರ್ಣಿ, ಕಾಶಪ್ಪನವರ್ ವಿರುದ್ಧ ಆರೋಪ ಹೊರಿಸಿದ್ದಾರೆ.
ಹೋರಾಟದಲ್ಲಿ ಭಾಗವಹಿಸಿದ್ದ ನಾಯಕರೇ ಸ್ವಾಮೀಜಿಗಳಿಗೆ ಕರೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಹೋರಾಟದಲ್ಲಿದ್ದ ಮೂರು ನಾಲ್ಕು ನಾಯಕರೇ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆ ಸ್ವಾಮಿಜಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಸಿಎಂ ಸೂಚನೆ ನೀಡಿದ್ದಾರೆ.