ಹೈದರಾಬಾದ್: ಆಂಧ್ರಪ್ರದೇಶದ (Andra Pradesh) ಉಪ ಮುಖ್ಯಮಂತ್ರಿ (Deputy CM) ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ (Pawan kalyan) ತುರ್ತುಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ತೀವ್ರವಾಗಿ ಅಸ್ವಸ್ಥ ಗೊಂಡ ಪವನ್ ಕಲ್ಯಾಣ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ವಿವಿಧ ಪರೀಕ್ಷೆಗಳು ಮತ್ತು MRI ಸ್ಕ್ಯಾನಿಂಗ್ ನಡೆಸಿದ ನಂತರ, ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನಿರ್ಧರಿಸಿತು.
ಚೇತರಿಸಿಕೊಳ್ಳುತ್ತಿರುವ ನಟ
ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು, ಪವನ್ ಕಲ್ಯಾಣ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಅವರ ಪತ್ನಿ ಅನ್ನಾ ಕೊನಿಡೆಲಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಪವನ್ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಅವರ ಸಹೋದರ ನಾಗಬಾಬು ಮತ್ತು ಸೋದರಳಿಯ ಸಾಯಿ ಧರಂ ತೇಜ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಿ ಮೋದಿಯವರಿಂದ ಆರೋಗ್ಯ ವಿಚಾರಣೆ
ಪವನ್ ಕಲ್ಯಾಣ್ ಅವರ ಅಸ್ವಸ್ಥತೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಹಾಗೂ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಅವರು ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ವೈದ್ಯಕೀಯ ತಂಡದ ಸಲಹೆಯಂತೆ ಪವನ್ ಕಲ್ಯಾಣ್ ಅವರು ಕನಿಷ್ಠ 7 ರಿಂದ 10 ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಪೂರ್ಣ ಪ್ರಮಾಣದ ಚೇತರಿಕೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು ಎಂದು ತಿಳಿದುಬಂದಿದೆ. ಈ ಅನಿರೀಕ್ಷಿತ ಘಟನೆಯಿಂದ ಅಭಿಮಾನಿಗಳಲ್ಲಿ ಉಂಟಾಗಿದ್ದ ಆತಂಕವು, ಈಗ ಅವರ ಆರೋಗ್ಯ ಸ್ಥಿರವಾಗಿರುವ ಸುದ್ದಿಯಿಂದ ನಿರಾಳವಾಗಿದೆ.
ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಹೋರಾಟಕ್ಕೆ ಸಂದ ಜಯ, 21 ಮಂದಿಗೆ ಸರ್ಕಾರಿ ಉದ್ಯೋಗ ಭಾಗ್ಯ