ಬೆಂಗಳೂರು: ಜಾನುವಾರು ಸಾಗಾಟ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಮಾರ್ಚ್ 20 ರಂದು ನಗರದ ಹೊರವಲಯದ ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಅಲೀಮುಲ್ಲಾ ಅವರ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಅಲೀಮುಲ್ಲಾ ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುತ್ತಿದ್ದ ವೇಳೆ, ಪುನೀತ್ ಕೆರೆಹಳ್ಳಿ ಮತ್ತು ಸಹಚರರಾದ ಸಂತೋಷ್, ಚೇತನ್ ಮತ್ತು ದೀಪಕ್ ನೈಸ್ ರಸ್ತೆಯಲ್ಲಿ ತಡೆದಿದ್ದಾರೆ. ಪುನೀತ್ ಮತ್ತು ಆತನ ಸಹಚರರು ವಾಹನದ ಚಾಲಕ ರಫೀಕ್ ರನ್ನು ಮೊದಲು ಥಳಿಸಿದ್ದಾರೆ. ದನಗಳನ್ನು ಸಾಗಿಸುತ್ತಿದ್ದ ಕಾರಣ ಆತನನ್ನು ನಿಂದಿಸಿ ಹೊಡೆದಿದ್ದಾರೆ. ಬಳಿಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.
ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ನಾಲ್ಕು ಆರೋಪಿಗಳಿಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಕ್ಕೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸ್ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಗಳನ್ನು ಏಳು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.