ಪಾಕಿಸ್ತಾನ : ಇಲ್ಲಿನ ವಜಿರಿಸ್ತಾನ್ ಪ್ರದೇಶದಲ್ಲಿ ಇಂದು (ಮಾ .14) ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಈ ಘಟನೆಯಲ್ಲಿ ಇಸ್ಲಾಮಿಸ್ಟ್ ನಾಯಕ ನದೀಮ್ ಮತ್ತು ಮಕ್ಕಳು ಸೇರಿದಂತೆ ಒಟ್ಟು ಮೂವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನದೊಂದಿಗಿನ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ರಾಜಕೀಯ ಪಕ್ಷದ ಸ್ಥಳೀಯ ನಾಯಕ ಅಬ್ದುಲ್ಲಾ ನದೀಮ್ ಎಂಬುವವರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸದ್ಯ ನದೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ದಕ್ಷಿಣ ವಜಿರಿಸ್ತಾನ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.ಅಲ್ಲಿನ ಸ್ಥಳೀಯ ಮಾಧ್ಯಮಗಳ ಪ್ರಕಾರ, ಶುಕ್ರವಾರದ ಪ್ರಾರ್ಥನೆಯ ವೇಳೆ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ್ದು ಇದುವರೆಗೂ ಯಾವುದೇ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.