ತಿರುಪತಿ: ಕಲಿಯುಗದ ಜೀವಂತ ದೇವರೆಂದೇ ಪ್ರಸಿದ್ಧನಾಗಿರುವ ಶ್ರೀನಿವಾಸನ(Lord Srinivasa) ದರ್ಶನ ಪಡೆಯಲು ದೇಶ-ವಿದೇಶಗಳಿಂದ ಪ್ರತಿದಿನ ಸಾವಿರಾರು ಭಕ್ತರು ತಿರುಮಲ ಬೆಟ್ಟಕ್ಕೆ(Tirumala Hill) ಬರುತ್ತಾರೆ. ಬಹುತೇಕ ಭಕ್ತರು ಬಸ್ಸುಗಳು, ಕಾರುಗಳು ಹಾಗೂ ಸ್ವಂತ ವಾಹನಗಳ ಮೂಲಕ ಬೆಟ್ಟವನ್ನು ತಲುಪಿದರೆ, ಇನ್ನು ಕೆಲವು ಭಕ್ತರು ತಮ್ಮ ಹರಕೆಯ ಭಾಗವಾಗಿ ಅಲಿಪಿರಿ ಅಥವಾ ಶ್ರೀವಾರಿ ಮೆಟ್ಟಿಲು ಮಾರ್ಗಗಳ ಮೂಲಕ ನಡೆದುಕೊಂಡು ತಿರುಮಲ ಬೆಟ್ಟವನ್ನು ಏರುತ್ತಾರೆ.
ಈ ಎರಡೂ ಕಾಲ್ನಡಿಗೆ ಮಾರ್ಗಗಳಲ್ಲಿ ಕಡಿದಾದ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಯನ್ನು ತಲುಪಬೇಕಾಗುತ್ತದೆ. ಸಾಮಾನ್ಯವಾಗಿ ಯುವಕರೇ ಈ ಮೆಟ್ಟಿಲುಗಳನ್ನು ಹತ್ತುವಾಗ ದಣಿದು ನಡುವೆ ವಿರಾಮ ಪಡೆದುಕೊಳ್ಳುತ್ತಾರೆ.
ಇನ್ನು ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಇರುವವರಂತೂ ಈ ಮಾರ್ಗದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎನ್ನಬಹುದು. ಆದರೆ, ಇವೆಲ್ಲವನ್ನೂ ಸುಳ್ಳು ಮಾಡುವಂತೆ ತಮಿಳುನಾಡಿನ(Tamil Nadu) 116 ವರ್ಷದ ಶತಾಯುಷಿ ಅಜ್ಜಿಯೊಬ್ಬರು ಭಕ್ತಿಯ ಪರಾಕಾಷ್ಠೆಯಿಂದ ಇಡೀ ಬೆಟ್ಟವನ್ನು ಮೆಟ್ಟಿಲುಗಳ ಮೂಲಕವೇ ಹತ್ತಿ ತಿರುಮಲ ಶ್ರೀಗಳ ದರ್ಶನ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಭಕ್ತಿ ಮತ್ತು ಅದ್ಭುತ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ ಈ 116 ವರ್ಷದ ಅಜ್ಜಿಯ ಅಪರೂಪದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೃದ್ಧೆ ತನ್ನ ಕುಟುಂಬದ ಸದಸ್ಯರೊಂದಿಗೆ ಅತ್ಯಂತ ಉತ್ಸಾಹದಿಂದ ತಿರುಮಲದ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ, ಅಲ್ಲಿಗೆ ಬಂದ ಮತ್ತೊಬ್ಬ ಸಹಭಕ್ತರು ಅಜ್ಜಿಯ ಭಕ್ತಿಯನ್ನು ಕಂಡು ಮನಸೋತಿದ್ದಾರೆ.
116ನೇ ವಯಸ್ಸಿನಲ್ಲಿ ತಿರುಪತಿ ಬೆಟ್ಟವೇರಿದ ಅಜ್ಜಿ!#116yearsoldwoman #oldwoman #tirumala #Kannadanews #Navasamajanews pic.twitter.com/3H9vsaycJO
— navasamaja (@navasamajanews) July 4, 2026
ಅಜ್ಜಿಯನ್ನು ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಮೊಬೈಲ್‌ನಲ್ಲಿ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವ ಯುವಕರಿಗೇ ಸವಾಲೊಡ್ಡುವಂತೆ ಸಾಗುತ್ತಿದ್ದ ಅಜ್ಜಿಯ ದೃಶ್ಯಗಳು ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು, ನೆಟ್ಟಿಗರು ಅಜ್ಜಿಯ ಭಕ್ತಿ ಹಾಗೂ ಅದ್ಭುತ ಆರೋಗ್ಯಕ್ಕೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.
ಗೋವಿಂದನ ನಾಮಸ್ಮರಣೆ ಮಾಡುತ್ತಾ ಕಷ್ಟಕರವಾದ ಹಾದಿಯನ್ನು ಸಲೀಸಾಗಿ ಕ್ರಮಿಸಿದ ಈ ವೃದ್ಧೆಯ ನಡೆ, ತಿರುಮಲಕ್ಕೆ ಬರುವ ಸಾವಿರಾರು ಭಕ್ತರಲ್ಲಿ ಹೊಸ ಭಕ್ತಿ ಹಾಗೂ ಪ್ರೇರಣೆಯನ್ನು ತುಂಬುವಂತಿದೆ.