ನವದೆಹಲಿ: ಪಂಜಾಬ್ ಪೊಲೀಸರ ಬಲೆಯಿಂದ ಕಳೆದ 12 ದಿನಗಳಿಂದ ತಪ್ಪಿಸಿಕೊಳ್ಳುತ್ತಿರುವ ಖಾಲಿಸ್ತಾನ ಬೆಂಬಲಿಗ ಅಮೃತ್ ಪಾಲ್ ಅಜ್ಞಾತ ಸ್ಥಳವೊಂದರಿಂದ ವಿಡಿಯೊ ಬಿಡುಗಡೆ ಮಾಡಿದ್ದಾನೆ.
ವಿದೇಶಿ ಮೂಲಗಳಿಂದ ಈ ವಿಡಿಯೊ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದ್ದು, ವಿಡಿಯೊ 2 ದಿನಗಳಷ್ಟು ಹಳೆಯದ್ದು ಎನ್ನಲಾಗಿದೆ.
ಬ್ರಿಟನ್ ನ ಸಾಮಾಜಿಕ ಜಾಲತಾಣ ಹ್ಯಾಂಡಲ್ ಗಳಿಂದ ವಿಡಿಯೊ ಹರಿಯಬಿಡಲಾಗಿದೆ ಎನ್ನುವ ವರದಿಗಳಿವೆ.
ವಿಡಿಯೊದಲ್ಲಿ ಮಾತನಾಡಿರುವ ಅಮೃತ್ ಪಾಲ್ ಸಿಂಗ್, “ನನ್ನ ವಿರುದ್ಧದ ಸರಕಾರದ ಬಂಧನ ಕಾರ್ಯಾಚರಣೆ ನನ್ನ ಬಂಧನದ ಕುರಿತಾದದ್ದಲ್ಲ. ಬದಲಾಗಿ ಇದು ಸಿಖ್ ಸಮುದಾಯದ ಮೇಲಿನ ದಾಳಿ” ಎಂದಿದ್ದಾನೆ.
“ಇಂಟರ್ ನೆಟ್ ಸ್ಥಗಿತಗೊಂಡಿದ್ದು, ಏನಾಗುತ್ತಿದೆ ಎನ್ನುವುದು ನನಗೆ ತಿಳಿದಿರಲಿಲ್ಲ. ಏನೆಲ್ಲಾ ನಡೆಯಿತು ಎನ್ನುವ ಕೆಲವು ಸುದ್ದಿಗಳನ್ನು ನೋಡಿದ್ದೇನೆ. ಪಂಜಾಬ್ ಸರಕಾರ ದೌರ್ಜನ್ಯದ ಪರಮಾವಧಿ ಮೀರಿದೆ. ಸಿಖ್ ಯುವಜನತೆಯನ್ನು ಜೈಲಿಗಟ್ಟಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳನ್ನು ಇವರು ಬಿಟ್ಟಿಲ್ಲ. ವಿಕಲಾಂಗರನ್ನೂ ಜೈಲಿಗಟ್ಟಲಾಗಿದೆ” ಎಂದು ಅಮೃತ್ ಪಾಲ್ ಹೇಳಿದ್ದಾನೆ.
ಪ್ರತ್ಯೇಕ ಸಿಖ್ ರಾಜ್ಯ ಬೇಕೆಂದು ನಿರಂತರ ಆಗ್ರಹಿಸುತ್ತಾ ಬರುತ್ತಿರುವ ಅಮೃತ್ ಪಾಲ್ ಕಳೆದ ತಿಂಗಳು ಪಂಜಾಬ್ ನಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಶಸ್ತ್ರಸಜ್ಜಿತ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾದವನು.
ಈತ ಹೊಶಿಯಾಪುರ್ ನ ಗ್ರಾಮಗಳ ಮೂಲಕ ಆತ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದಾನೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ಲಭಿಸಿತ್ತು.