ನಂದಿನಿಯನ್ನು ಮೂಲೆಗುಂಪು ಮಾಡಿ ಗುಜರಾತ್ ಮೂಲದ ಅಮುಲ್ ಗೆ ರಾಜ್ಯ ಬಿಜೆಪಿ ಸರ್ಕಾರ ಮಣೆ ಹಾಕುತ್ತಿದೆ ಎಂಬ ಆರೋಪಗಳಿಗೆ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. ನಂದಿನಿ vs ಅಮುಲ್ ವಿಚಾರದಲ್ಲಿ ಸಿಎಂ ಸೇರಿದಂತೆ ಬಹುತೇಕ ಎಲ್ಲಾ ಬಿಜೆಪಿ ನಾಯಕರು ಡ್ಯಾಮೇಜ್ ಕಂಟ್ರೋಲ್ ಮಾಡುವತ್ತ ಪ್ರಯತ್ನಿಸುತ್ತಿದ್ದಾರೆ.
ನಮ್ಮ ನಂದಿನಿ ಹಾಲಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ, 2018ರಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿತ್ತು, ಪ್ರಸ್ತುತ 94 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು, ನಂದಿನಿ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು,ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ ಜೆಡಿಎಸ್ ರಾಜಕೀಯಕ್ಕಾಗಿ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ ಕಾರಣ. ಕೆಎಂಎಫ್‌ನ ಶೇ.15 ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿ ಹೇಳಿದೆ.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ವಿರುದ್ಧ ಆರೋಪ ಮಾಡಲು ವಿರೋಧ ಪಕ್ಷಗಳಿಗೆ ವಿಷಯಗಳೇ ಸಿಗುತ್ತಿಲ್ಲ. ರಾಜ್ಯದಲ್ಲಿ ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರತವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.