ಬೆಂಗಳೂರು: ಐಸ್‍ಕ್ರೀಂ ಸೇರಿ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಗುಜರಾತ್ ಮೂಲದ ಅಮುಲ್, ಈಗ ಹಾಲು ಮತ್ತು ಮೊಸರನ್ನು ಮಾರುಕಟ್ಟೆಗೆ ಇಳಿಸಲು ಮುಂದಾಗಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
‘ಅಮುಲ್ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್ ಫಾರ್ಮ್‍ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು’ ಎಂಬಿತ್ಯಾದಿ ಮಾಹಿತಿಗಳನ್ನು ಅಮೂಲ್ ಟ್ವಿಟರ್‌ನಲ್ಲಿ ಹೇಳಲಾಗಿದೆ.
ಈ ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಂಡಿರುವ ಪತ್ರಕರ್ತ, ಬರಹಗಾರ ಎಸ್.ಶ್ಯಾಮ್ ಪ್ರಸಾದ್ ಅವರು ‘ನಂದಿನಿಯ ಶವಪೆಟ್ಟಿಗೆಗೆ ಮತ್ತೊಂದು ಮೊಳೆ’ ಎಂದು ಕಿಡಿಕಾರಿದ್ದಾರೆ.
ಪರಸ್ಪರ ಆಧಿಪತ್ಯ ಹೊಂದಿರುವಲ್ಲಿ ಸ್ಪರ್ಧೆಗೆ ಇಳಿಯಬಾರದು ಎಂಬ ಅಲಿಖಿತ ನಿಯಮವನ್ನು, ಕೆಎಂಎಫ್ ನಿದ್ರಿಸುತ್ತಿರುವ ಹೊತ್ತಿನಲ್ಲಿ ಅಮುಲ್ ಮುರಿಯುತ್ತಿದೆ. ಬೆಂಗಳೂರಿನ ವಸತಿ ಸಮುಚ್ಚಯಗಳ ಅಮುಲ್ ಹಾಲು ಮತ್ತು ಮೊಸರಿನ ಪ್ರವಾಹವಾಗಲಿದೆ. ಕನ್ನಡಿಗೇತರರು ಇದಕ್ಕೆ ಮಣೆಹಾಕಲಿದ್ದಾರೆ.
ಕೆಎಂಎಫ್ ಈ ಹಿಂದೆಯೇ ವಿಫಲಗೊಳಿಸಿದ್ದ ಅಮುಲ್‍ನ ಹಳೆಯ ಯೋಜನೆಯಿದು. ಸಂತೃಪ್ತಿಗೊಂಡಿರುವ ಕೆಎಂಎಫ್ ಆಡಳಿತವು, ಅಮುಲ್‍ನ ಕೊಳ್ಳೆ ಹೊಡೆಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಟ್ಟಿದೆ. ಶಾ (ಗುಜರಾತ್‍ನವರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ) ಇನ್ನೂ ಹೊಡೆತ ಶುರು ಮಾಡಿಲ್ಲ. ಒಂದು ಬಾರಿ ಅದು ಶುರುವಾದರೆ, ನಂದಿನಿಗೆ ಕೌಂಟ್‍ಡೌನ್ ಆರಂಭವಾಗುತ್ತದೆ. ರಾಜಕೀಯ ಅವ್ಯವಸ್ಥೆ ನಡೆಯಿಂದಾಗಿ ಕನ್ನಡಿಗರು ಮೈಸೂರು ಲ್ಯಾಂಪ್, ಎನ್‍ಜಿಎಎಫ್ ಇತ್ಯಾದಿಗಳನ್ನು ಕಳೆದುಕೊಂಡಿದ್ದಾರೆ. ಇದೀಗ ನಂದಿನಿ ಸರತಿಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.