ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಂಡಿರುವ ಕಾಂಗ್ರೆಸ್‍ಗಿಂತ, ಬಿಜೆಪಿಯ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಅತಿಹೆಚ್ಚು ಅಭಿವೃದ್ದಿ ಕಂಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಉದ್ಗರಿಸಿದ್ದಾರೆ. ರಾಜ್ಯ ಪ್ರವಾಸಕ್ಕಾಗಿ ಆಗಮಿಸಿರುವ ಅಮಿತ್ ಶಾ ರಾಯಚೂರಿನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಪುಲ್ವಾಮಾ ಘಟನೆ ನಡೆದ ಒಂದು ವಾರದಲ್ಲೇ ಪ್ರತೀಕಾರ ತೆಗೆದುಕೊಂಡಿದ್ದು ಹಾಗೂ ಕೋವಿಡ್ ಸಮಯದಲ್ಲಿ ಎಲ್ಲರಿಗೂ ಎರಡು ಡೋಸೇಜ್ ಉಚಿತ ವ್ಯಾಕ್ಸಿನ್ ನೀಡಿದ್ದನ್ನು ಉಲ್ಲೇಖಿಸಿ ಬಿಜೆಪಿ ಸರ್ಕಾರದಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ನುಡಿದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಳ ನೀತಿಯನ್ನು ಕುರಿತು ಮಾತನಾಡಿ, ಮುಸ್ಲಿಮರಿಗಿದ್ದ ಮೀಸಲಾತಿಯನ್ನು ಕಡಿತಗೊಳಿಸಿ ಒಕ್ಕಲಿಗ, ಲಿಂಗಾಯಿತ ಸಮುದಾಯಕ್ಕೆ ನೀಡಲಾಗಿದೆ. ಇಡೀ ದೇಶದ ಟ್ರೆಂಡ್ ಪ್ರಧಾನಿ ಮೋದಿಯವರೊಡನೆ ಸಾಗುತ್ತಿದ್ದು, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅವನತಿ ಕಾಣುತ್ತಿದೆ ಎಂದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿಸಿ ಯಡಿಯೂರಪ್ಪ ಕ್ಷೇತ್ರಾಭಿವೃದ್ಧಿಗೆ ಐದು ಸಾವಿರ ಕೋಟಿ ರೂ. ಮೀಸಲಿರಿಸಿದ್ದಾರೆ. ಪ್ರಧಾನಿ ಮೋದಿ ನಾರಾಯಣಪುರ ಯೋಜನೆಗೆ ಐದು ಸಾವಿರ ಕೋಟಿ ರೂ. ನೀಡಿದ್ದಾರೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣವೂ ನಿರ್ಮಾಣವಾಗಲಿದೆ. ಹೀಗಾಗಿ ರಾಯಚೂರಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತನೀಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಶಂಕುಸ್ಥಾಪನೆಗೆ ಚಾಲನೆ ನೀಡಲಾಯಿತು