ಕೆಂಪೇಗೌಡ ಮತ್ತು ಬಸವೇಶ್ವರರು ಈ ನಾಡಿನ ಮಹಾನುಭಾವರಾಗಿದ್ದರೆಂದು ನಾನು ತಿಳಿದಿದ್ದೇನೆ. ಅಂಥ ಮಹಾನುಭಾವರ ಭವ್ಯ ಪುತ್ಥಳಿಗಳನ್ನು ಅನಾವರಣಗೊಳಿಸುತ್ತಿರುವುದು ಮಹಾ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು. ಭಾನುವಾರ ರಾತ್ರಿ ಬೆಂಗಳೂರು ಹಬ್ಬದ ಸಮಾರೋಪ ಸಮಾರಂಭದ ಅಂಗವಾಗಿ ವಿಧಾನಸೌಧದ ಬಳಿ ನಾಡಪ್ರಭು ಕೆಂಪೇಗೌಢ ಮತ್ತು ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಕೆಂಪೇಗೌಡರ ಮುಂದಾಲೋಚನೆಯಿಂದ ನಿರ್ಮಾಣವಾದ ಬೆಂಗಳೂರು ಮತ್ತು ಬಸವೇಶ್ವರರ ತತ್ವಾದರ್ಶಗಳು, ವಚನಗಳ ಕೊಡುಗೆಯ ಬಗ್ಗೆ ಸ್ಮರಿಸಿದ ಅಮಿತ್ ಶಾ ಬಳಿಕ ಮಿಕ್ಕ ಸಮಯವನ್ನು ರಾಜಕೀಯ ಭಾಷಣವನ್ನಾಗಿ ಪರಿವರ್ತಿಸಿದರು.
ಕಳೆದ ಬಾರಿ ಕರ್ನಾಟಕದ ಜನಾಶೀರ್ವಾದ ನಮ್ಮ ಮೇಲಿತ್ತು. ಆದರೆ ಅದರ ಪ್ರಮಾಣ ಕಡಿಮೆ ಆಗಿತ್ತು. ಕೇವಲ 104 ಸ್ಥಾನ ದೊರಕಿತು. ಇದರ ಪರಿಣಾಮ ಕೆಲಸಮಯ ವಿಪಕ್ಷಗಳು ಆಡಳಿತ ನಡೆಸುವಂತಾದವು. ಆದರೆ ಈ ಬಾರಿ ಪೂರ್ಣ ಬಹುಮತ ನೀಡುವ ಮೂಲಕ ಬಿಜೆಪಿಯನ್ನು ಜನರು ಆಶೀರ್ವದಿಸಬೇಕಿದೆ ಎಂದರು.
ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೊಳಿಸಹೊರಟಿರುವ ನೂತನ ಮೀಸಲಾತಿ ನೀತಿಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ಅಮಿತ್ ಶಾ, ಭಾರತದ ಸಂವಿಧಾನವು ಎಂದಿಗೂ ಧರ್ಮಾಧಾರಿತ ಮೀಸಲಾತಿ ನೀತಿಯನ್ನು ಒಪ್ಪುವುದಿಲ್ಲ. ಧರ್ಮಾಧಾರಿತವಾಗಿ ನಮ್ಮ ಸಂವಿಧಾನ ರಚನೆಯಾಗಿಲ್ಲ. ಕಾಂಗ್ರೆಸ್ ಕೇವಲ ಮತಗಳ ಗಳಿಕೆಯ ದುರಾಸೆಯಿಂದಾಗಿ ಸಂವಿಧಾನಕ್ಕೆ ದ್ರೋಹ ಎಸಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆಧಾರದ ಮೇಲೆ ಮೀಸಲಾತಿಯನ್ನು ಜಾರಿಗೊಳಿಸುತ್ತಿರುವುದು ಸರಿಯಾದ ಕ್ರಮವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಮನಸೋಇಚ್ಛೆ ಟೀಕಿಸಿದ ಅಮಿತ್ ಶಾ, ಇದುವರೆಗೂ ಕಾಂಗ್ರೆಸ್‍ನಲ್ಲಿ ಸಿಎಂ ಹುದ್ದೆಗಾಗಿ ಜಗಳ ನಡೆಯುತ್ತಿದೆ. ಇಂಥಾ ಜಗಳಗಂಟರಿಂದ ಯಾವ ಅಭಿವೃದ್ಧಿಯನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಪ್ರಧಾನಿ ಮೋದಿ ಕರ್ನಾಟಕದ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದರು.
ಬೆಂಗಳೂರಿನ ಪ್ರತಿಯೊಂದು ಕ್ಷೇತ್ರವನ್ನೂ ಅಭಿವೃದ್ಧಿ ಮಾಡುತ್ತೇವೆಂದು ಘೋಷಿಸಿದ ಅಮಿತ್ ಶಾ, ಕಮಲ ಅರಳುವಂತೆ ಮಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸೇರಿದಂತೆ ಹಲವು ಬಿಜೆಪಿ ನಾಯಕರು ಮತ್ತು ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು