ಕಾಶ್ಮೀರದ ಶಾರದಾ ದೇಗುಲವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಬುಧವಾರ ವರ್ಚುಯಲ್ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಿದರು. ಶಾರದಾ ಸಂಸ್ಕೃತಿಯ ಅನ್ವೇ಼ಷಣೆಗೆ ಈ ಮೂಲಕ ನಾಂದಿ ಹಾಡಿರುವುದಾಗಿ ಅಮಿತ್ ಶಾ ತಿಳಿಸಿದ್ದಾರೆ. ವಿಧಿ 371 ರದ್ದತಿಯು ಕೇಂದ್ರಾಡಳಿತ ಪ್ರದೇಶವನ್ನು ತನ್ನ ಪುರಾತನ ಸಂಸ್ಕೃತಿ ಮತ್ತು ಸಂಪ್ರದಾಯದತ್ತ ಕೊಂಡೊಯ್ಯಲಿದೆ ಎಂದ ಅಮಿತ್ ಶಾ, ಇದು ನೂತನ ಬೆಳವಣಿಗೆಯ ಆರಂಭವಷ್ಟೇ ಎಂದಿದ್ದಾರೆ.
ತಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಾಗಲೆಲ್ಲಾ ಮಾಡುತ್ತಿದ್ದ ಮೊದಲ ಕೆಲಸವೆಂದರೆ, ಶಾರದಾ ಮಾತೆಯ ದೇಗುಲದಲ್ಲಿ ತಲೆಬಾಗುವುದು ಎಂದು ನುಡಿದ ಅಮಿತ್ ಶಾ, ಶಾರದಾಪೀಠ ದರ್ಶನಕ್ಕೆ ಯಾತ್ರಿಕರಿಗೆ ಪ್ರವೇಶಾವಕಾಶ ನೀಡುವಂತೆ ಕರ್ತಾಪುರ್ ಕಾರಿಡಾರ್ ಉದ್ದಕ್ಕೂ ಇರುವ ಪ್ರದೇಶಗಳ ನಿವಾಸಿಗಳಿಂದ ಬೇಡಿಕೆ ಬಂದಿದ್ದು, ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ಬಗ್ಗೆ ಗಮನ ಹರಿಸಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರಮೋದಿಯವರ ಪ್ರಯತ್ನದಿಂದಾಗಿ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲ್ಪಟ್ಟಿದ್ದು, ಅಂದಿನಿಂದ ಕಾಶ್ಮೀರ ಕಣಿವೆ ಮತ್ತು ಜಮ್ಮುವಿನಲ್ಲಿ ಶಾಂತಿ ನೆಲೆಸಿದೆ. ಕಣಿವೆ ಪ್ರದೇಶವು ಕ್ರಮೇಣ ತನ್ನ ಮೂಲ ಸಂಪ್ರದಾಯಕ್ಕೆ ಮರಳುತ್ತಿದೆ ಎಂದ ಅಮಿತ್ ಶಾ ಅದನ್ನು ಗಂಗಾ ಜಮುನಾ ತೆಹ್‌ಜೀಬ್ (ಸಂಸ್ಕೃತಿ) ಎಂದು ವರ್ಣಿಸಿದ್ದಾರೆ.
ಜಮ್ಮು ಕಾಶ್ಮೀರದ ಕರ್ನಾಹ್ ಎಲ್‌ಓಸಿಯಲ್ಲಿರುವ, ಶತಮಾನಗಳ ಇತಿಹಾಸವಿರುವ ಯಾತ್ರಾಸ್ಥಳವಾಗಿರುವ ಶಾರದಾ ಪೀಠಕ್ಕೆ ಯಾತ್ರೆಯನ್ನು ಪುನರಾರಂಭಿಸುವ ಸಲುವಾಗಿ, ಪ್ರಾಚೀನ ದೇಗುಲ ಮತ್ತು ಅದರ ಕೇಂದ್ರ ಸ್ಥಳವನ್ನು ಪುನರ್ನಿಮಿಸಲಾಗಿದೆ. ಈ ಸ್ಥಳ ಭಾರತ ಉಪಖಂಡದ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿತ್ತು.