ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮೇಲಿಂದ ಮೇಲೆ ಬಿಜೆಪಿ ನಾಯಕರು ರಾಜ್ಯಕ್ಕಾಮಿಸುತ್ತಿದ್ದಾರೆ. ನಾಳೆ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುಂಚೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ.
ನಾಳೆ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದು, ಉಪಾಹಾರಕ್ಕೆ ಅಮಿತ್ ಶಾರನ್ನು ಬಿಎಸ್‌ವೈ ಆಹ್ವಾನಿಸಿದ್ದಾರೆ. ಯಡಿಯೂರಪ್ಪ ನಿವಾಸಕ್ಕೆ ಅಮಿತ್ ಶಾ ಭೇಟಿ ವಿಚಾರ ಬಿಜೆಪಿಗರಲ್ಲಿ ಕುತೂಹಲ ಕೆರಳಿಸಿದೆ. ಅಮಿತ್ ಶಾ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಬ್ರೇಕ್‌ಫಾಸ್ಟ್‌ಗೆ ಆಹ್ವಾನ ನೀಡಲಾಗಿದೆ.
ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ಶ್ರೇಯಸ್ಸು ಯಾರಿಗಾದ್ರೂ ಸಲ್ಲಬೇಕಾದ್ರೆ ಅದು ಬಿ.ಎಸ್.ವೈಗೆ ಮಾತ್ರ. ಈ ಹಿಂದೆಯೂ ಬಿಜೆಪಿ ಜೊತೆ ಮುನಿಸಿಕೊಂಡು ಕೆ.ಜೆ.ಪಿ ಸ್ಥಾಪಿಸಿದ ಯಡಿಯೂರಪ್ಪನವರ ಪವರ್ ಏನು ಅಂತ ಬಿಜೆಪಿಯ ಕೇಂದ್ರ ನಾಯಕರಿಗೂ ಗೊತ್ತಿದೆ. ಅದಲ್ಲದೇ ಲಿಂಗಾಯತ ಸಮುದಾಯದ ಉನ್ನತ ನಾಯಕನೆಂದೇ ಪರಿಗಣಿಸಲಾಗಿರುವ ಯಡಿಯೂರಪ್ಪ ಚುನಾವಣೆಗೆ ಅನಿವಾರ್ಯ ಅನ್ನೋದು ಹೊಸ ವಿಷಯವಲ್ಲ. ಇದೆಲ್ಲವನ್ನೂ ಮುಖತಃ ಚರ್ಚಿಸಲು ಅಮಿತ್ ಶಾ ಬಿಎಸ್.ವೈ ಮನೆಗೆ ಭೇಟಿ ನೀಡಲಿದ್ದಾರೆ.
ಅದಲ್ಲದೇ ಇತ್ತೀಚೆಗೆ ಸಚಿವ ಸೋಮಣ್ಣನವರ ಸಿಟ್ಟು, ಬಿಎಸ್‌ವೈ ಬಗೆಗಿನ ಬಹಿರಂಗ ಅಸಮಾಧಾನ, ವಿಜಯೇಂದ್ರ ವಿರುದ್ಧ ಕೆಲ ಬಿಜೆಪಿ ನಾಯಕರು ತೋರುತ್ತಿರುವ ಅಸಹನೆ.. ಇವೆಲ್ಲವೂ ನಾಳೆ ಚರ್ಚೆಯಾಗುವ ಸಾಧ್ಯತೆ ಇದೆ.
ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾರಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ವಿಷಯದ ಕುರಿತ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಲಿರುವ ಅಮಿತ್ ಶಾ, ಬೆಂಗಳೂರಿನ ಕಮ್ಮಘಟ್ಟ ಗ್ರಾಮದಲ್ಲಿ ಶೇಖರ್ ಸಮೃದ್ಧಿ ಸೌಧದ ಶಂಕುಸ್ಥಾಪನೆ, ಹಾಗೂ ಸಹಕಾರ ಸಚಿವಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.