ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಎಚ್ ಡಿ ಕುಮಾರಸ್ವಾಮಿಯನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಕರ್ನಾಟಕದಲ್ಲಿ ಶೀಘ್ರದಲ್ಲೇ ಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಕುತೂಹಲ ಮೂಡಿಸಿದೆ.
ಹೆಚ್‌ಡಿಕೆ ಮುಂಜಾನೆ ಕೊಲ್ಕತ್ತಾಗೆ ತಲುಪಿದ್ದು, ಸಂಜೆ 4.50 ರ ಸುಮಾರಿಗೆ ಬ್ಯಾನರ್ಜಿ ಅವರ ನಿವಾಸಕ್ಕೆ ತೆರಳಿದ್ದಾರೆ.
ಮೂಲಗಳ ಪ್ರಕಾರ, ಉಭಯ ನಾಯಕರು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ಚರ್ಚಿಸಿದ್ದು, ಕರ್ನಾಟಕ ಚುನಾವಣೆಯಲ್ಲಿ ಬ್ಯಾನರ್ಜಿ ನೀಡುವ ಸಹಕಾರಕ್ಕೆ ಪ್ರತಿಯಾಗಿ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಜೆಡಿಎಸ್ ನೀಡಲಿದೆ ಎಂಬ ಮಾತುಕತೆಯಾಗಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡನ್ನೂ ಸಮಾನವಾಗಿ ದೂರ ಇಟ್ಟು ಪ್ರಾದೇಶಿಕ ಪಕ್ಷಗಳ ಬೇರೆಯದೇ ಒಕ್ಕೂಟ ರಚಿಸುವ ಬಗ್ಗೆ ನಡೆಯುತ್ತಿರುವ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎಂದೂ ಹೇಳಲಾಗುತ್ತಿದೆ.
2019 ರ ಲೋಕಸಭೆ ಚುನಾವಣೆಗೆ ಮುನ್ನವೂ ಮಮತಾ ಬ್ಯಾನರ್ಜಿ ಅವರು ಕರೆದಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಹೆಚ್‌ಡಿಕೆ ಭಾಗವಹಿಸಿದ್ದರು.