ಬೆಂಗಳೂರು: ಗಾಂಧೀಜಿಯ ಭಾವಚಿತ್ರವನ್ನು ಹಾಕಿ ಜಾಹೀರಾತು ಮೂಲಕ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ (BJP) ವಿರುದ್ಧ ಡಿಜಿ, ಐಜಿಪಿಗೆ ಕೆಪಿಸಿಸಿ (KPCC) ದೂರು ಸಲ್ಲಿಸಿದೆ.
ಇಂದು ಬೆಂಗಳೂರಿನ ಪೊಲೀಸ್ ಕೇಂದ್ರ ಕಚೇರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಹಾಕಿ ಜಾಹೀರಾತು ಮೂಲಕ ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದರು.
ದೂರಿನಲ್ಲೇನಿದೆ ?
ರಾಜ್ಯ ಬಿಜೆಪಿ ಘಟಕ ಕನ್ನಡ ಹಾಗೂ ಆಂಗ್ಲ ದಿನಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಅಹಿಂಸೆಯ ಪ್ರತೀಕವಾಗಿ ಬಿಂಬಿಸುವ ಬದಲು ಅವರು ಕೋಲಿನಿಂದ ಹೊಡೆಯುತ್ತಿರುವ ರೀತಿಯಲ್ಲಿ ಚಿತ್ರಿಸಿರುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೇ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಜಾಗತಿಕ ಪ್ರತೀಕವಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಈ ರೀತಿಯಾಗಿ ಚಿತ್ರಿಸುವುದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ರಾಷ್ಟ್ರಪಿತರಿಗೆ ತೀವ್ರ ಅವಮಾನ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಈ ಜಾಹೀರಾತು ಸಮಾಜದಲ್ಲಿ ದ್ವೇಷ, ಅಶಾಂತಿ ಹಾಗೂ ಹಿಂಸೆಯನ್ನು ಉತ್ತೇಜಿಸುವುದರ ಜೊತೆಗೆ, ಸಾರ್ವಜನಿಕರ ಶಾಂತಿಗೆ ಗಂಭೀರ ಧಕ್ಕೆ ಉಂಟುಮಾಡುವ ಸ್ವರೂಪ ಹೊಂದಿದೆ. ಆದ್ದರಿಂದ ಜಾಹೀರಾತು ನೀಡಿದವರು ಹಾಗೂ ಸಂಬಂಧಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದಿದ್ದಾರೆ.
ಗಾಂಧೀಜಿ ಬಳಸಿ ಕೇಸರಿ ಸೇನೆ ಟಕ್ಕರ್
ಕಾಂಗ್ರೆಸ್ (Congress) ಬಿಜೆಪಿ ಮಧ್ಯೆ ಜಾಹೀರಾತು ಸಮರ ಶುರುವಾಗಿದೆ. ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ಧ ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಜಾಹೀರಾತು ಒಂದನ್ನು ನೀಡಿತ್ತು. ಇದೀಗ ಬಿಜೆಪಿ (Bjp) ಕೂಡಾ ಜಾಹೀರಾತು ನೀಡಿದೆ. ಅದನ್ನು ಕಂಡು ಕಾಂಗ್ರೆಸ್ ಕೆರಳಿ ಕೆಂಡವಾಗಿದೆ.
ಕಾಂಗ್ರೆಸ್ನ ಸಂಘಪ್ಪ ಆ್ಯಡ್ಗೆ ಬಿಜೆಪಿಯು ನುಂಗಪ್ಪ ಆ್ಯಡ್ ಮೂಲಕ ಕೌಂಟರ್ ಕೊಟ್ಟಿದೆ. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಗಾಂಧೀಜಿಯೇ ಕೋಲಿನಿಂದ ಹೊಡೆಯುವಂತೆ ಚಿತ್ರಿಸಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಾಹೀರಾತು ವಾರ್ ಜೋರಾಗಿದೆ.
ಬಿಜೆಪಿ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು ಎಂದು ಶೀರ್ಷಿಕೆ ನೀಡಲಾಗಿದೆ. ‘ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರ , ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ – ಜಿ ರಾಮ್ ಜಿ ಯೋಜನೆ ಕುರಿತಾಗಿ ಅಪಪ್ರಚಾರ ಮಾಡ್ತೀರಾ?’ ಎಂದು ದೊಣ್ಣೆ ಎತ್ತಿ ಹಿಡಿದ ಹಾಗೆ ಚಿತ್ರಿಸಲಾಗಿದೆ.
ಇದನ್ನೂ ಓದಿ: ಗಾಂಧಿ v/s ಸಂಘಪ್ಪ ಸದ್ದು; ಜಾಹೀರಾತಿಗೆ ಸರ್ಕಾರದ ಸಮರ್ಥನೆ, ಮುಂದೇನಾಯ್ತು?
