Thursday, March 20, 2025
Homeರಾಜಕೀಯಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾಗಳು ಬಂದ್:‌ ಯತ್ನಾಳ್

ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾಗಳು ಬಂದ್:‌ ಯತ್ನಾಳ್

ಗದಗ: ಕೋಮು ವಿಭಜಕ ಹೇಳಿಕೆಗಳಿಂದ ಪದೇ ಪದೇ ಸುದ್ದಿಯಾಗುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮದರಸಾಗಳನ್ನು ಬಂದ್ ಮಾಡುತ್ತೇವೆ ಎಂದು ಹೇಳಿದರು.

ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಮದರಸಾಗಳನ್ನು ಬಂದ್‌ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಯತ್ನಾಳ್‌ ಕೂಡಾ ಮದರಸಾಗಳನ್ನು ಮುಚ್ಚುವ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ರೀತಿ ಕರ್ನಾಟಕದಲ್ಲಿ ಕೂಡಾ ಮದರಸಾಗಳನ್ನು ಬಂದ್ ಮಾಡುತ್ತೇವೆ. ಇವತ್ತು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣ. ಶಿವಾಜಿ ಇಲ್ಲದಿದ್ದರೆ, ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅಭಯ್ ಪಾಟೀಲ್, ಅಝರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಹಿಮಂತ ಬಿಸ್ವಾ ಶರ್ಮಾರಿಂದ ಅಸ್ಸಾಂನಲ್ಲಿ ಹಿಂದೂಗಳು ಜೀವನ ಮಾಡಲು ಸಾಧ್ಯವಾಯಿತು, ಇಲ್ಲದಿದ್ದರೆ, ಹಿಂದೂಗಳು ಅಸ್ಸಾಂ ಬಿಟ್ಟು ತೆರಳಬೇಕಿತ್ತು ಎಂದು ಅವರು ಹೇಳಿದರು.

ಟಿಪ್ಪು ವಿರುದ್ಧ ವಾಗ್ದಾಳಿ ಮಾಡಿದ ಅವರು, ಟಿಪ್ಪು ಲಕ್ಷಾಂತರ ಹಿಂದೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿಸಿದ್ದಾನೆ. ವಿಜಯಪುರದಲ್ಲಿ ಎರಡೂವರೆ ಲಕ್ಷ ಮತದಾರರಲ್ಲಿ 1 ಲಕ್ಷ 3 ಸಾವಿರ ಟಿಪ್ಪು ಸುಲ್ತಾನ್ ಇದ್ದಾರೆ. ನಾನು ಟಿಪ್ಪೂ ಸಂತಾನವಲ್ಲ, ಶಿವಾಜಿ ಸಂತಾನ. ಶಿವಾಜಿ ಮಹಾರಾಜರ ಕನಸು ಹಿಂದವಿ ಸಾಮ್ರಾಜ್ಯ ಆಗಿತ್ತೇ ಹೊರತು ಮರಾಠ ಸಾಮ್ರಾಜ್ಯ ಅಲ್ಲ. ಹಾಗಾಗಿ ಮರಾಠಿ, ಕನ್ನಡ ಎಂದು ಹೋರಾಡೋದು ಬೇಡ, ಅದು ಮುಗಿದಿದೆ. ಇನ್ನೇನಿದ್ರು ಹಿಂದೂ, ನಾವೆಲ್ಲ ಹಿಂದೂಗಳಾಗಿ ಇದ್ರೆ ಭಾರತ ಉಳಿಯುತ್ತದೆ. ಇಲ್ಲವಾದರೆ ಉರ್ದು ಕಲಿಯಬೇಕಾಗುತ್ತೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!