ನವದೆಹಲಿ: ಮುಂಬರುವ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಗೆ (Election) ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಪ್ರಶಾಂತ್ ಕಿಶೋರ್‌ರ ಚುನಾವಣಾ ತಂತ್ರಗಾರಿಕೆ ಸಂಸ್ಥೆಯಾದ ಐ-ಪ್ಯಾಕ್ (I-PAC) ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಯಾದವ್ ಈ ನಿರ್ಧಾರಕ್ಕೆ ಕಾರಣ ಏನು?
ಈ ನಿರ್ಧಾರದ ಹಿಂದೆ ಪ್ರಮುಖವಾಗಿ ಕಾನೂನು ಸಂಘರ್ಷಗಳು ಮತ್ತು ಇತ್ತೀಚಿನ ಚುನಾವಣಾ ಸೋಲುಗಳ ಪ್ರಭಾವವಿದೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಐ-ಪ್ಯಾಕ್ ಸಂಸ್ಥೆಯ ಸಹ-ಸಂಸ್ಥಾಪಕ ವಿನೇಶ್ ಚಾಂದೆಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವುದು ಸಮಾಜವಾದಿ ಪಕ್ಷಕ್ಕೆ ಮುಜುಗರ ತಂದಿದೆ. ಹವಾಲಾ ದಂಧೆಯ ಮೂಲಕ ಕೋಟ್ಯಂತರ ರೂಪಾಯಿ ಹಣವನ್ನು ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪಗಳನ್ನು ಇಡಿ ಮಾಡಿದೆ. ಸಂಸ್ಥೆಯು ತನ್ನ ವ್ಯವಹಾರಗಳಲ್ಲಿ ಅರ್ಧದಷ್ಟು ಹಣವನ್ನು ನಗದು ರೂಪದಲ್ಲಿ ಪಡೆಯುತ್ತಿತ್ತು ಎಂಬ ಅಂಶವು ತನಿಖೆಯ ವೇಳೆ ಬಯಲಾಗಿದೆ.
ಟಿಎಮ್‌ಸಿ ಗೆಲಿಸುವಲ್ಲಿ ವಿಫಲ ಆಯ್ತಾ ಐ ಪ್ಯಾಕ್?
ಕೇವಲ ಕಾನೂನು ಹೋರಾಟ ಮಾತ್ರವಲ್ಲದೆ, ಚುನಾವಣಾ ಫಲಿತಾಂಶಗಳು ಕೂಡ ಅಖಿಲೇಶ್ ಯಾದವ್ ಅವರ ಈ ತೀರ್ಮಾನಕ್ಕೆ ಕಾರಣವಾಗಿವೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಐ-ಪ್ಯಾಕ್ ಸಂಸ್ಥೆಯ ತಂತ್ರಗಾರಿಕೆಯು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಗೆಲುವು ತಂದುಕೊಡುವಲ್ಲಿ ವಿಫಲವಾಗಿದೆ. ಮಮತಾ ಬ್ಯಾನರ್ಜಿ ತಮ್ಮ ಸ್ವಂತ ಕ್ಷೇತ್ರಗಳಲ್ಲೇ ಸೋಲನುಭವಿಸಿರುವುದು ಸಂಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ತನಿಖಾ ಸಂಸ್ಥೆಗಳ ಒತ್ತಡದಿಂದಾಗಿ ಐ-ಪ್ಯಾಕ್ ತನ್ನ ಕಾರ್ಯಾಚರಣೆಯನ್ನು ತಗ್ಗಿಸಿರುವುದು ಸಮಾಜವಾದಿ ಪಕ್ಷದ ಚುನಾವಣಾ ಸಿದ್ಧತೆಗೆ ಅಡ್ಡಿಯಾಗಿತ್ತು.
ಐ-ಪ್ಯಾಕ್ ಜಾಗಕ್ಕೆ ಶೋಟೈಮ್
ಅಖಿಲೇಶ್ ಯಾದವ್ ಅವರು ಐ-ಪ್ಯಾಕ್ ಬದಲಿಗೆ ಶೋಟೈಮ್ ಎಂಬ ಮತ್ತೊಂದು ಸಾಮಾಜಿಕ ಜಾಲತಾಣ ಮತ್ತು ಚುನಾವಣಾ ನಿರ್ವಹಣಾ ಸಂಸ್ಥೆಯೊಂದಿಗೆ ಕೆಲಸ ಮುಂದುವರಿಸಲು ತೀರ್ಮಾನಿಸಿದ್ದಾರೆ. 2027ರ ಚುನಾವಣೆ ಅಖಿಲೇಶ್ ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ, ಯಾವುದೇ ಅಪಾಯಕ್ಕೆ ಮೈಯೊಡ್ಡದೆ ಹಳೆ ಒಪ್ಪಂದವನ್ನು ಕೈಬಿಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರಿಂದ ಬಂದ ಅಭಿಪ್ರಾಯಗಳು ಮತ್ತು ಸಂಸ್ಥೆಯ ಆಂತರಿಕ ಗೊಂದಲಗಳನ್ನು ಗಮನಿಸಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ನನ್ನನ್ನು ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ, ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ