ನವದೆಹಲಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan) ಆಪ್ತ ಸಂಜಯ್ ಸಿಂಗ್ (Sanjay Singh) ಅವರನ್ನು ಭಾರತದ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿ ಭಾರೀ ಗಮನ ಸೆಳೆಯುತ್ತಿರುವ ನಡುವೆಯೇ ಮಾಜಿ ಚಾಂಪಿಯನ್‌ಗಳು ಮುಂದಿನ ತಲೆಮಾರುಗಳಿಗೆ ಕೋಚಿಂಗ್ ನೀಡಲು ಮುಂದೆ ಬರಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಬಜರಂಗ್ ಪೂನಿಯಾ (Bajrang Punia) ಅವರು ಪದ್ಮಶ್ರೀಯನ್ನು ಹಿಂದಿರುಗಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಇನ್ನು ಪ್ರತಿಕ್ರಿಯೆ ನೀಡಲ್ಲ ಎಂದು ಠಾಕೂರ್ ಹೇಳಿದ್ದಾರೆ.
ನಮ್ಮ ಹಿಂದಿನ ಚಾಂಪಿಯನ್‌ಗಳು ಮುಂದೆ ಬಂದು, ಉದಯೋನ್ಮುಖ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಕೋಚಿಂಗ್ ನೀಡಬೇಕೆಂದು ಅವರು ಕರೆ ನೀಡಿದ್ದಾರೆ.
ʼನಮ್ಮ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಇದನ್ನು ಹೈಲೈಟ್ ಮಾಡಬೇಕಾಗಿದೆʼ ಎಂದು ಠಾಕೂರ್ ಹೇಳಿದರು.
‘ನಾವು ಹಲವಾರು ಪ್ರಮುಖ ಸ್ಪರ್ಧೆಗಳಲ್ಲಿ ಗೆದ್ದಿದ್ದೇವೆ. ನಾವು ಕಳೆದ ವರ್ಷ ಮೊದಲ ಥಾಮಸ್ ಕಪ್ ಗೆದ್ದಿದ್ದೇವೆ. ನಾವು ಹಾಕಿ, ಅಥ್ಲೆಟಿಕ್ಸ್ ಸೇರಿದಂತೆ ಸಾಕಷ್ಟು ಯಶಸ್ಸನ್ನು ಕಂಡಿದ್ದೇವೆ. ಈಗ, ಚಾಂಪಿಯನ್‌ಗಳು ಮುಂಬರುವ ಅಥ್ಲೀಟ್‌ಗಳಿಗೆ ಜ್ಞಾನ ಮತ್ತು ಅನುಭವವನ್ನು ಧಾರೆ ಎರೆಯಬೇಕುʼ ಎಂದು ಠಾಕೂರ್ ಹೇಳಿದ್ದಾರೆ.