ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಅಧಿಕೃತವಾಗಿ ಕಮಲ ಪಾಳೆಯದಿಂದ ಹೊರನಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಬೆನ್ನಲ್ಲೇ, ಅಣ್ಣಾಮಲೈ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ (Annamalai) ಸುದೀರ್ಘ ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಈ ಮೂಲಕ ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ ಹೇಳುತ್ತಿದ್ದಂತೆಯೇ, ಅವರು ಶೀಘ್ರದಲ್ಲೇ ತಮಿಳುನಾಡಿನಲ್ಲಿ ಸ್ವಂತವಾಗಿ ನೂತನ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಹರಡುತ್ತಿವೆ. ಆದರೆ, ಈ ಕುರಿತು ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
2 ದಿನ ಕಾಯಿರಿ ಎಂದಿದ್ದೇಕೆ ಅಣ್ಣಾಮಲೈ?
ತಾವು ಹೊಸ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಅಣ್ಣಾಮಲೈ, ದಯವಿಟ್ಟು ಇನ್ನು ಎರಡು ದಿನ ಕಾಯಿರಿ. ನಾವು ಒಟ್ಟಿಗೆ ಕುಳಿತು ಈ ಬಗ್ಗೆ ಸುದೀರ್ಘವಾಗಿ ಮಾತನಾಡೋಣ ಎಂದು ಹೇಳುವ ಮೂಲಕ ತಮ್ಮ ಮುಂದಿನ ತೀರ್ಮಾನವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದರು. ತಾವು ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದೇನೆ ಎಂಬ ಸುಳಿವನ್ನು ಅವರು ಈ ಹೇಳಿಕೆಯ ಸಂದರ್ಭದಲ್ಲೇ ನೀಡಿದ್ದರು.
ಬಿಜೆಪಿಯಿಂದ ಹೊರಬರಲು ಕಾರಣಗಳೇನು?
ಇತ್ತೀಚೆಗೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು (Three-Language Policy) ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಸಿಬಿಎಸ್‌ಇ (CBSE) ಆದೇಶವನ್ನು ಅಣ್ಣಾಮಲೈ ಅವರು ವಿರೋಧಿಸಿದ್ದರು. ಅಲ್ಲದೆ ಈ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಕೇಂದ್ರ ಸರ್ಕಾರದ ನೀತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದವರೇ ನೇರವಾಗಿ ಪ್ರಶ್ನಿಸಿದ್ದನ್ನು ಕಂಡ ರಾಜಕೀಯ ವಿಶ್ಲೇಷಕರು, ಅಣ್ಣಾಮಲೈ ಬಿಜೆಪಿಯಿಂದ ಹೊರಬಂದು ಸ್ವಂತ ಪಕ್ಷ ಕಟ್ಟಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಅಂದೇ ಊಹಿಸಿದ್ದರು.
ಕಳೆದ 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಟಿವಿ ದಿನಕರನ್ ಮತ್ತು ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಕರೆತರುವಲ್ಲಿ ಅಣ್ಣಾಮಲೈ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಕಡೆಗಣಿಸಿ, ಅವರ ಸ್ಥಾನಕ್ಕೆ ನೈನಾರ್ ನಾಗೇಂದ್ರನ್‌ರನ್ನು ತಮಿಳುನಾಡು ಬಿಜೆಪಿ ಸಾರಥಿಯನ್ನಾಗಿ ನೇಮಿಸಿತ್ತು. ಅಲ್ಲದೆ, ಅಣ್ಣಾಮಲೈ ಅವರಿಗೆ ಇಷ್ಟವಿಲ್ಲದಿದ್ದರೂ ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿಯನ್ನು ಪುನರಾರಂಭಿಸಿತ್ತು.
ಈ ಬೆಳವಣಿಗೆಗಳಿಂದ ಭ್ರಮನಿರಸನಗೊಂಡಿದ್ದ ಅಣ್ಣಾಮಲೈ, ಕಳೆದ ಕೆಲವು ದಿನಗಳಿಂದ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಇದೀಗ ಕಮಲ ಪಾಳೆಯದಿಂದ ಅಧಿಕೃತವಾಗಿ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಅಮಿತ್ ಷಾ ಅವರೊಂದಿಗಿನ ಭೇಟಿಯ ನಂತರ ಅಣ್ಣಾಮಲೈ ತಮಿಳುನಾಡು ರಾಜಕಾರಣದಲ್ಲಿ ಹೊಸ ಪ್ರಾದೇಶಿಕ ಪಕ್ಷದ ಅಸ್ತಿತ್ವಕ್ಕೆ ಮುನ್ನುಡಿ ಬರೆಯಲಿದ್ದಾರೆಯೇ ಅಥವಾ ಅವರ ಮುಂದಿನ ತಂತ್ರಗಾರಿಕೆ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ಶಾಕ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತ ರಾಜೀನಾಮೆ!