ದೆಹಲಿ ಸರ್ಕಾರದ ಬಜೆಟ್ ಅನ್ನು ಕೇಂದ್ರ ಗೃಹ ಸಚಿವಾಲಯ ಅನುಮೋದಿಸಿದ ಕೆಲವೇ ಗಂಟೆಗಳ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ‘ದೊಡ್ಡಣ್ಣ’ ಎಂದು ಕರೆದಿದ್ದು, ಕೇಂದ್ರದ ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ.
ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ʼಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲದಿದ್ದರೆ ದೆಹಲಿ 10 ಪಟ್ಟು ಹೆಚ್ಚು ಅಭಿವೃದ್ಧಿ ಕಾಣುತ್ತಿತ್ತು. ದೆಹಲಿ ಸರ್ಕಾರವು ಕೆಲಸ ಮಾಡಲು ಬಯಸುತ್ತದೆ, ತಿಕ್ಕಾಟವನ್ನಲ್ಲ. ನಾವು ತಿಕ್ಕಾಟದಿಂದ ಬೇಸತ್ತಿದ್ದೇವೆ, ಏಕೆಂದರೆ ಅದು ಯಾರಿಗೂ ಒಳಿತು ಮಾಡುವುದಿಲ್ಲ. ನಾವು ಪ್ರಧಾನಿಯವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ, ನಮಗೆ ಯಾವುದೇ ಜಗಳ ಬೇಡʼ ಎಂದು ಹೇಳಿದ್ದಾರೆ.
ಪ್ರಧಾನಿ ದೆಹಲಿಯನ್ನು ಗೆಲ್ಲಬೇಕಾದರೆ ಮೊದಲು ನಗರದ ಜನರ ಮನ ಗೆಲ್ಲಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ನೀನು ಅಣ್ಣ, ನಾನು ಕಿರಿಯ ಸಹೋದರ. ನೀವು ನನ್ನನ್ನು ಬೆಂಬಲಿಸಿದರೆ, ನಾನೂ ನಿಮಗೆ ಬೆಂಬಲ ಕೊಡುತ್ತೇನೆ. ನೀವು ಕಿರಿಯ ಸಹೋದರನ ಹೃದಯವನ್ನು ಗೆಲ್ಲಲು ಬಯಸಿದರೆ, ಅವನನ್ನು ಪ್ರೀತಿಸಬೇಕು.ʼ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಬಜೆಟ್ ಅನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸುವ ಅಭ್ಯಾಸವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ರಚನೆಗೆ ವಿರುದ್ಧವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಇಂದು ಬಜೆಟ್ ಮಂಡನೆಯಾಗಬೇಕಿತ್ತು. ಕೇಂದ್ರ ಅದನ್ನು ತಡೆದು ನಿಲ್ಲಿಸಿದೆ. ಗೃಹ ಸಚಿವಾಲಯದ ಪ್ರಶ್ನೆಗೆ ನಾವು ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಉತ್ತರಿಸಿದ್ದೇವೆ. ಅವರು ಈಗ ಅದನ್ನು ಅನುಮೋದಿಸಿದ್ದಾರೆ. ನಾವು ತಲೆಬಾಗಬೇಕೆಂದು ಅವರು ಬಯಸಿದ್ದರು. ಅದು ಅವರ ದುರಹಂಕಾರವೇ ಹೊರತು ಬೇರೇನೂ ಅಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.